ಕರ್ನಾಟಕ ಬಂದ್ ಘೋಷಣೆ ವೇಳೆ ಅಪಸ್ವರ: ಸಭೆಯಲ್ಲೇ ಮಾರಾಮಾರಿ

ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಸಿಡಿದೆದ್ದಿರುವ ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿವೆ.
ಹೋರಾಟದ ಭಾಗವಾಗಿ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕರವೇ ಪ್ರವೀಣ್ ಶೆಟ್ಟಿ ಸಮ್ಮುಖದಲ್ಲಿ ಸಭೆ ನಡೆಯಿತು. ಅಂತಿಮವಾಗಿ ಡಿ.29ರ ಮಧ್ಯರಾತ್ರಿಯೊಳಗೆ ಎಂಇಎಸ್ ಅನ್ನು ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಡಿ.31ರಂದು ಕರ್ನಾಟಕ ಬಂದ್ ಆಗಲಿದೆ ಎಂದು ವಾಟಳ್ ನಾಗರಾಜ್ ಘೋಷಣೆ ಮಾಡುತ್ತಿದ್ದಂತೆ ಬಂದ್ ಬೇಡ ಎಂದು ವಂದೇ ಮಾತರಂ ಸಂಘಟನೆಯ ಶಿವಕುಮಾರ್ ನಾಯಕ್ ಅಡ್ಡ ಬಂದರು. ಬಂದ್ ವಿರೋಧಿಸಿದ ಶಿವಕುಮಾರ್ ನಾಯಕ್ ವಿರುದ್ಧ ಹಲವರು ಸಂಘಟನೆಗಳ ಮುಖಂಡರು ಮುಗಿಬಿದ್ದರು. ಸುದ್ದಿಗೋಷ್ಠಿಯಿಂದ ಶಿವಕುಮಾರ್ ನಾಯಕ್ರನನ್ನು ಹೊರಕಳಿಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಕೈಕೈ ಮಿಲಾಯಿಸಿದ್ದು, ಶಿವಕುಮಾರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಬಂದ್ ಕುರಿತ ಸಭೆಯಿಂದ ದೂರವೇ ಉಳಿದಿದ್ದ ಕರವೇ ನಾರಾಯಣ್ ಗೌಡ, ಎಂಇಎಸ್ಗೆ ಬುದ್ಧಿ ಕಲಿಸಲು ಬಂದ್ ಒಂದೇ ಪರಿಹಾರವಲ್ಲ. ನಾಳೆ ಈ ಬಗ್ಗೆ ಚರ್ಚಿಸಿ ಒಂದು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಎಂಇಎಸ್ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಡೆಡ್ಲೈನ್ ವಿಧಿಸಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಮನವಿ ಮಾಡಿದ್ದಾರೆ.
ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಎಂಇಎಸ್ನ ಪುಂಡಾಟಕ್ಕೆ ಫುಲ್ ಸ್ಟಾಪ್ ಹಾಕಲು ಕನ್ನಡಿಗರೆಲ್ಲರೂ ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಬನ್ನಿ ಎಂದು ಕನ್ನಡ ಫಿಲಿಂ ಚೇಂಬರ್ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ನೀಡಿದ್ದಾರೆ.