
: ಆನ್‌ಲೈನ್‌ನಲ್ಲಿ ನೀಡುವುದರ ಜತೆಗೆ ಸಂಬಂಧಪಟ್ಟ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತರು ದಾಖಲೆ ಸಮೇತ ವಿವರವಾದ ದೂರು ದಾಖಲಿಸುವುದರಿಂದ ತನಿಖೆಗೆ ಅನುಕೂಲವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದರು.
ಸಾರ್ವಜನಿಕರ ಸಂಪರ್ಕ ಸಭೆ ಅಂಗವಾಗಿ ಶನಿವಾರ ಫೇಸ್‌ಬುಕ್ ಲೈವ್ ಮೂಲಕ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಆನ್‌ಲೈನ್ ಮೂಲಕ ದೂರು ದಾಖಲಿಸಿದರೂ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಆದರೆ, ಆಯಾ ಠಾಣೆಗಳಲ್ಲಿ ವಿವರಣೆ ನೀಡಿ ದೂರು ನೀಡುವುದು ತನಿಖೆಗೆ ಅನುಕೂಲವಾಗಲಿದೆ. ಅಲ್ಲದೇ, ಆನ್‌ಲೈನ್ ದೂರನ್ನು ಪರಿಗಣಿಸಿ ಪೊಲೀಸರು ದೂರುದಾರರನ್ನು ಸಂಪರ್ಕಿಸಿದಾಗ ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಓಲಾ ಆಟೋದಲ್ಲಿ ಪ್ರಯಾಣಿಸುವಾಗ ಚಾಲಕ ತನ್ನ ಮೈ - ಕೈ ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿ ಅಸಭ್ಯವಾಗಿ ವರ್ತಿಸಿದ್ದ ಎಂದು ಸಂತ್ರಸ್ತೆಯೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಯಾವಾಗ ಈ ಘಟನೆ ನಡೆದಿದೆ. ಎಲ್ಲಿಂದ ಎಲ್ಲಿಗೆ ಹೋಗುವಾಗ ಈ ದೌರ್ಜನ್ಯ ನಡೆದಿದೆ. ಹಾಗೂ ಆಟೋ ನಂಬರ್ ಮತ್ತು ಚಾಲಕನ ಬಗ್ಗೆ ಮಾಹಿತಿಗಳ ಸಮೇತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಜತಗೆ ನಮ್ಮ ಕಚೇರಿಗೂ ಒಂದು ದೂರು ಪ್ರತಿ ನೀಡಿ. ಪ್ರಕರಣ ಎಷ್ಟೇ ಹಳೆಯಾದಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಉಲ್ಲಂಘನೆ ಮಾಡಿರುವ ಸವಾರರಿಗೆ ದಂಡ ವಿಧಿಸುತ್ತಾರೆ. ಆದರೆ, ರಶೀದಿ ನೀಡುವುದಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿ, ಯಾವ ಠಾಣೆ ವ್ಯಾಪ್ತಿಯಲ್ಲಿ ಈ ರೀತಿ ಸಂಚಾರ ಪೊಲೀಸರು ಮಾಡಿದ್ದಾರೆ ಆಯಾ ಠಾಣೆ ನಿರೀಕ್ಷಣಾಧಿಕಾರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ವಾಹನ ತಪಾಸಣೆ ವೇಳೆ ಮೊಬೈಲ್ ಪರಿಶೀಲನೆ: ಪೊಲೀಸರು ವಾಹನ ತಪಾಸಣೆ ವೇಳೆ ಅನಾವಶ್ಯಕವಾಗಿ ಮೊಬೈಲ್ ಪಡೆದು ವೈಯಕ್ತಿಕ ವಿಷಯಗಳನ್ನು ಪರಿಶೀಲನೆ ಮಾಡುತ್ತಾರೆ ಎಂದು ಕೇಳಿ ಬಂದ ದೂರಿಗೆ ಉತ್ತರಿಸಿದ ಅವರು, ಯಾವೊಬ್ಬ ಪೊಲೀಸರೂ ಅನಗತ್ಯವಾಗಿ ಯಾರ ಮೊಬೈಲ್ ಪರಿಶೀಲಿಸುವಂತಿಲ್ಲ. ಅನುಮಾನಗಳಿದ್ದರೆ ಮಾತ್ರ ಪರಿಶೀಲಿಸಬಹುದು. ಒಂದು ವೇಳೆ ಈ ರೀತಿ ತೊಂದರೆಗಳಾಗುತ್ತಿದ್ದರೆ ನೇರವಾಗಿ ನನಗೆ ದೂರು ನೀಡಿ. ವಾಹನ ತಪಾಸಣೆ ವೇಳೆ ಮೊಬೈಲ್ ಪರಿಶೀಲನೆ ನಡೆಸಿದ ಅಧಿಕಾರಿ ಹೆಸರು ಹಾಗೂ ಸ್ಥಳ ತಿಳಿಸಿ. ಅಲ್ಲದೇ, ಈ ರೀತಿ ಸಮಸ್ಯೆ ಇದ್ದಾಗ 080-22942215 ಸಂಪರ್ಕಿಸಿ ದೂರು ನೀಡಿ ಎಂದು ಹೇಳಿದರು.
ಚೀನಾ ಮೂಲದ ಲೋನ್ ಆ್ಯಪ್‌ಗಳಿಂದ ತೊಂದರೆ:
ಚೀನಾ ಮೂಲದ ಲೋನ್ ಆ್ಯಪ್‌ಗಳಿಂದ ತೊಂದರೆಯಿದ್ದರೆ ಯಾವುದೇ ಪೊಲೀಸ್ ಠಾಣೆಯಲ್ಲೂ ದೂರು ನೀಡಬಹುದು. ಕ್ರಮ ಕೈಗೊಳ್ಳಬಹುದು. ಅಷ್ಟೇ ಅಲ್ಲದೇ ಚೀನಾ ಆ್ಯಪ್‌ಗಳ ಬಳಕೆಯನ್ನು ಕಡಿಮೆ ಮಾಡಿ, ಅದರ ಸಾಧಕ - ಭಾದಕಗಳನ್ನು ತಿಳಿದುಕೊಂಡು ಮುಂದುವರಿಯಿರಿ ಎಂದು ಪಂತ್‌ಸಲಹೆ ನೀಡಿದರು.
ಸಂಚಾರ ಪೊಲೀಸರಿಗೆ ಬಾಡಿ ಕ್ಯಾಮರಾ
ಸಾರ್ವಜನಿಕರು ಹಾಗೂ ಸಂಚಾರ ಪೊಲೀಸರು ಸುರಕ್ಷಿತಾ ದೃಷ್ಟಿಯಿಂದ ನಿರ್ಭಯಾ ಅನುದಾನದಲ್ಲಿ ನಗರದ ಹಲವು ಸಂಚಾರ ಪೊಲೀಸ್ ಠಾಣೆಗಳಿಗೆ ಬಾಡಿ ಕ್ಯಾಮರಾ ನೀಡಲಾಗಿದೆ. ಅಲ್ಲದೆ, ಮೂರು ಸಾವಿರ ಸ್ಥಳಗಳನ್ನು ಗುರುತಿಸಿ ಏಳು ಸಾವಿರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿಸಿದರು.
ಮಾದಕ ಜಾಲದ ಮೇಲೆ ಕಟ್ಟೆಚ್ಚರ
ಹೊಸ ವರ್ಷದ ಹಿನ್ನೆಲೆ ನಾನಾ ಕಡೆಗಳಿಂದ ನಗರದೊಳಗೆ ಮಾದಕ ವಸ್ತು ಬರುವ ಸಂದೇಹವಿರುವುದರಿಂದ ನಗರ ಪೊಲೀಸರು ಮಾದಕ ಜಾಲದ ವಿರುದ್ಧ ಕಟ್ಟೆಚ್ಚರ ವಹಿಸಿದ್ದಾರೆ. ಹಲವು ಪಾರ್ಟಿಗಳು, ಹೈ - ಫೈ ಪ್ರದೇಶಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ನಾನಾ ಕಡೆಗಳಲ್ಲಿ ಪೊಲೀಸರು ನಿಗಾ ವಹಿಸಲಿದ್ದಾರೆ. ಮಾದಕ ಜಾಲ ತಡೆಗಟ್ಟಲೆಂದೇ ಪೊಲೀಸ್ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಹೇಳಿದರು.