ವಿದ್ಯುತ್ ತಗುಲಿ ಬಾಲಕ ಸಾವು: ಪರಿಹಾರ ವಿತರಣೆಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ತುಮಕೂರು ಜಿಲ್ಲೆಯ ಶಾಲೆಯೊಂದರಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಬಾಲಕನ ಪೋಷಕರಿಗೆ ಕೂಡಲೇ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, 'ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು' ಎಂದು ತಿಳಿಸಿತು.
'ತುಮಕೂರು ಜಿಲ್ಲೆಯ ಕರಿಕೆರೆ ಗ್ರಾಮದ ಶಾಲೆಯಲ್ಲಿ ಧ್ವಜ ಹಾರಿಸುವ ತಯಾರಿ ನಡೆಸುತ್ತಿದ್ದಾಗ ಧ್ವಜ ಕಂಬಕ್ಕೆ ವಿದ್ಯುತ್ ತಗುಲಿತ್ತು. ಚಂದನ್(16) ಮೃತಪಟ್ಟಿದ್ದು, ಶಶಾಂಕ್ ಮತ್ತು ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.
'ಇಬ್ಬರು ಬಾಲಕರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಚಿಕಿತ್ಸೆ ದೊರೆಯುವಂತೆ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕು. ಚಿಕಿತ್ಸಾ ವೆಚ್ಚವನ್ನೂ ಸರ್ಕಾರವೇ ಭರಿಸಬೇಕಾಗುತ್ತದೆ' ಎಂದು ಪೀಠ ಹೇಳಿತು.