ರೈತ ದೀಕ್ಷೆ ಮೂಲಕ ಮತ್ತೊಂದು ಹೋರಾಟಕ್ಕೆ ಅಣಿಯಾದ ಯುವಕರು | Belagavi |
ದೀಕ್ಷೆ ಎಂಬುದು ಒಂದು ಧಾರ್ಮಿಕ ವಿಧಿಯ ಆಚರಣೆಯಾಗಿದೆ. ಮಾನವ ತನ್ನ ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ದೀಕ್ಷೆ ಪಡೆದುಕೊಳ್ಳುವುದು ಎಲ್ಲ ಧರ್ಮದಲ್ಲಿ ನಡೆದು ಬಂದಿದೆ. ಆದರೆ ಕುಂದಾನಗರಿಯ ಚನ್ನಮ್ಮನ ಹುಟ್ಟೂರಿನಲ್ಲಿ ಯುವಕರು ರೈತ ದೀಕ್ಷೆ ಪಡೆಯುವುದರ ಮೂಲಕ ಒಂದು ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ. ಈ ರೈತ ಧೀಕ್ಷೆಗೆ ಕರ್ತೃ ಆಧುನಿಕ ಭಗೀರಥ ರೈತ ಚಿಂತಕರೊಬ್ಬರು ಇಂತಹ ಒಂದು ವಿನೂತನ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಬನ್ನಿ ಅವರು ಯಾರು ಅಂತ ತಿಳಿದುಕೊಳ್ಳೋಣ. ಇವರು ಶ್ರೀ ಪಿ. ಎಚ್ ನೀರಲಕೇರಿ ರೈತ ಭಾಂಧವ, ಹಿತ ಚಿಂತಕ ಮತ್ತು ಅನ್ನದಾತರ ಪಾಲಿಗೆ ದೇವರಾಗಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ದೇಶ್ಯಾದ್ಯಂತ ರೈತ ನಾಯಕ ಟಿಕಾಯತ ಅವರ ನೇತೃತ್ವದಲ್ಲಿ ಪಂಜಾಬ, ರಾಜಸ್ತಾನ, ಹರಿಯಾಣಾ, ದೆಹಲಿ ಸೇರಿದಂತೆ ಉತ್ತರ ಭಾಗದ ಲಕ್ಷಾಂತರ ಅನ್ನದಾತರು ದೆಹಲಿಯ ಕೆಂಪು ಕೋಟೆ ಮೇಲೆ ಲಗ್ಗೆ ಇಟ್ಟಿರುವುದು ಈಗ ಇತಿಹಾಸ. ಕೇಂದ್ರದ ಈ ಒಂದು ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದವರಲ್ಲಿ ನೀರಲಕೇರಿ ಕೂಡ ಒಬ್ಬರು. ಅಂತೇ ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸುಮಾರು ೬೦ ದಿನಗಳ ಕಾಲ ಉಪವಾಸ ನಡೆಸಿದರು. ಆದರೆ ಇವರ ಒಂದು ನಿಸ್ವಾರ್ಥ ಹೋರಾಟಕ್ಕೆ ಬೆರಳಣಿಕೆಯಷ್ಟು ರೈತರು ಸಾಥ್ ನೀಡಿರುವುದು ದುರದೃಷ್ಟಕರ ಸಂಗತಿ. ಆದರೆ ಇವರ ಆಂದೋಲನಕ್ಕೆ ಮೆಚ್ಚಿ ದೇಶದ ರೈತ ನಾಯಕ ಟಿಕಾಯತ, ಯಧುವೀರಸಿಂಗ್, ಕೇಂದ್ರ ಮಾಜಿ ಸಚಿವ ದಿವಂಗತ ಬಾಬಾಗೌಡ ಪಾಟೀಲ ಸೇರಿದಂತೆ ನೂರಾರು ರೈತ ನಾಯಕರು ಶಹಭಾಷಗಿರಿ ನೀಡಿದ್ದಾರೆ. ಈಗ ಕೇಂದ್ರ ಸರ್ಕಾರ ಕೃಷಿ ಮತ್ತು ವಿದ್ಯುತ್ ಕಾಯ್ದೆಗೆ ಮುಂದಾಗಿದೆ. ಇಂತಹ ರೈತ ವಿರೋಧಿ ನೀತಿಗಳು ಅನ್ನದಾತರಿಗೆ ಮಾರಕವಾಗಿದೆ ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ಇನ್ನೊಂದು ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಚೆನ್ನಮ್ಮನ ನಾಡಿನಿಂದ ಯುವಕರಿಗೆ ಹಸಿರು ಶಾಲು ಹೊದಿಸಿ ರೈತ ದೀಕ್ಷೆ ನೀಡಿ ಹೋರಾಟಕ್ಕೆ ಅಣಿಗೊಳಿಸಿದ್ದಾರೆ. ೧೪೦ ಕೋಟಿ ಜನರಿಗೆ ದುಡಿದು ಅನ್ನ ನೀಡುವ ರೈತರ ಬದುಕು ಅಭದ್ರವಾಗಿದೆ. ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ನೀಡದೇ ರೈತರನ್ನು ಸರಕಾರಗಳು ವಂಚಿಸುತ್ತಿವೆ. ಕೇಂದ್ರದ ರೈತ ವಿರೋಧಿ ನೀತಿಗಳು ರೈತರಿಗೆ ಮಾರಕವಾಗಿದ್ದು, ಇವುಗಳ ವಿರುದ್ಧ ಹೋರಾಟ ನಡೆಸಲು ರೈತರು ಸಂಘಟಿತರಾಗಬೇಕೆಂದು ರೈತ ಮುಖಂಡ ಪಿ.ಎಚ್. ನೀರಲಕೇರಿ ಕರೆ ನೀಡಿದ್ದಾರೆ. ಬೆಳಗಾವಿಯ ಕಿತ್ತೂರು ಚನ್ನಮ್ಮನ ನಾಡಿನ ಅವರಾದಿ ಗ್ರಾಮದಲ್ಲಿ ರೈತ ಹೋರಾಟದ ರೂಪರೇಷೆ ಸಿದ್ಧಪಡಿಸಲು ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ನಾನಾ ಭಾಗಗಳಿಂದ ರೈತ ಮುಖಂಡರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ೧೦೦ಕ್ಕೂ ಹೆಚ್ಚು ಗ್ರಾಮದ ಯುವಕರು ರೈತ ಸಂಘಟನೆ ದೀಕ್ಷೆ ಪಡೆದರು. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಸೇರಿದಂತೆ ವಿವಿಧ ಧರ್ಮದ ದೀಕ್ಷೆಯ ವಿಭಿನ್ನ ಪದ್ಧತಿಗಳಿವೆ. ಆದರೆ ಕರುನಾಡಿನ ರೈತರು ರೈತ ದೀಕ್ಷೆ ಎಂಬ ನಾಣ್ಣುಡಿಗೆ ಹೊಸ ಪರಿಕಲ್ಪನೆ ನೀಡಿದ್ದಾರೆ.