ಚಾಮರಾಜನಗರ: ಆಮ್‌ ಆದ್ಮಿ ಪಾರ್ಟಿಯಿಂದ ʻಮಹಿಳಾ ಪ್ರಣಾಳಿಕೆʼ ಸಂವಾದ ಕಾರ್ಯಕ್ರಮ

ಚಾಮರಾಜನಗರ: ಆಮ್‌ ಆದ್ಮಿ ಪಾರ್ಟಿಯಿಂದ ʻಮಹಿಳಾ ಪ್ರಣಾಳಿಕೆʼ ಸಂವಾದ ಕಾರ್ಯಕ್ರಮ

ಚಾಮರಾಜನಗರ: ಚಾಮರಾಜ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಘಟಕವು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಹಯೋಗದೊಂದಿಗೆ ʻಮಹಿಳಾ ಪ್ರಣಾಳಿಕೆʼ ಸಂವಾದ ಕಾರ್ಯಕ್ರಮ ನಡೆಸಿತು.

ಸಂವಾದದಲ್ಲಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ನಾಯಕಿ ಮಾಲವಿಕ ಗುಬ್ಬಿವಾಣಿ, "ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದಾಗಿನಿಂದಲೂ ಮಹಿಳೆಯರಿಗೆ ಮತದಾನದ ಹಕ್ಕು ಇದೆ.

ಆದರೂ ರಾಜಕೀಯ ಪಕ್ಷಗಳು ಮಹಿಳೆಯರನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಮಹಿಳೆಯರ ಏಳಿಗೆಯಾಗಬೇಕೆಂದರೆ ಚುನಾವಣಾ ಪ್ರಣಾಳಿಕೆಗಳಲ್ಲಿ ಮಹಿಳೆಯರ ಉನ್ನತಿಗೆ ಪೂರಕವಾದ ವಿಷಯಗಳು ಹೆಚ್ಚಾಗಿ ಸ್ಥಾನ ಪಡೆಯಬೇಕು. ಇದನ್ನು ಮಾಡದೇ, ಮಹಿಳೆಯರ ಪರವಾಗಿ ಕೇವಲ ಪುಂಖಾನುಪುಂಖವಾಗಿ ಮಾತನಾಡುವವರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ" ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯು ಯಾವಾಗಲೂ ಜನರಿಂದ ಅಭಿಪ್ರಾಯ ಸಂಗ್ರಹಿಸಿಯೇ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತದೆ. ಅನುಭವ ಹಾಗೂ ಜ್ಞಾನವಿರುವ ಜನರು ಮುಂದೆ ಬಂದು ಸಲಹೆಗಳು ಹಾಗೂ ಉಪಾಯಗಳನ್ನು ನೀಡಿದಾಗ ಮಾತ್ರ ಅರ್ಥಪೂರ್ಣ ಪ್ರಣಾಳಿಕೆ ಸಿದ್ಧವಾಗುತ್ತದೆ ಎಂದು ಎಎಪಿ ನಂಬಿದೆ. ಇದನ್ನು ಕಾರ್ಯರೂಪಕ್ಕೆ ತರಲು, ಎಎಪಿ ಚಾಮರಾಜ ಆಕಾಂಕ್ಷಿ ಮಾಲವಿಕ ಗುಬ್ಬಿವಾಣಿಯವರು ಕರ್ನಾಟಕ ಮಹಿಳಾ ದೌರ್ಜನ್ಯ ಒಕ್ಕೂಟ, ಸಮತಾ ವೇದಿಕೆ ಹಾಗೂ ಮಹಿಳೆಯರಿಗಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಅನೇಕ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಆಳವಾದ ಜ್ಞಾನ, ಸುದೀರ್ಘ ಅನುಭವ ಹೊಂದಿರುವ ಸಂಪರ್ಕಿಸಿ, ಕರ್ನಾಟಕ ಮಹಿಳಾ ದೌರ್ಜನ್ಯ ಒಕ್ಕೂಟ ಸಹಯೋಗದಲ್ಲಿ ಮಹಿಳಾ ಪ್ರಣಾಳಿಕೆ ಸಂವಾದ ಆಯೋಜಿಸಿದ್ದರು.

ಆಸ್ತಿ ಹಕ್ಕುಗಳು, ಆಡಳಿತ ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಾಧಿಕಾರಗಳಲ್ಲಿ ಮಹಿಳಾ ಪ್ರಾತಿನಿಧ್ಯ, ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಅಪೌಷ್ಟಿಕತೆ, ತಾರತಮ್ಯ ಮಾಡುವ ಸಾಂಪ್ರದಾಯಿಕ ಪದ್ಧತಿಗಳು, ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಮಹಿಳೆಯರನ್ನು ತೋರಿಸುತ್ತಿರುವ ರೀತಿ - ಮುಂತಾದ ಹಲವು ವಿಷಯಗಳ ಕುರಿತು ಸಂವಾದದಲ್ಲಿ ಚರ್ಚಿಸಲಾಯಿತು. ಎಲ್ಲರೂ ತುಂಬುಹೃದಯದಿಂದ ಭಾಗವಹಿಸಿದ್ದರು ಹಾಗೂ ಇದರಿಂದಾಗಿ ಪ್ರಣಾಳಿಕೆಗೆ ಅಗತ್ಯವಿರುವ ನಿರ್ದಿಷ್ಟ ಶಿಫಾರಸುಗಳು ದೊರೆತವು.