ಕನಸಾಗಿಯೇ ಉಳಿದ ಹಲವು ಬೇಡಿಕೆ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಅಭಿಪ್ರಾಯವೇನು..?

ಕನಸಾಗಿಯೇ ಉಳಿದ ಹಲವು ಬೇಡಿಕೆ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಅಭಿಪ್ರಾಯವೇನು..?

ಚಿಕ್ಕಬಳ್ಳಾಪುರ, ಫೆಬ್ರವರಿ 18: ಚುನಾವಣೆಯ ವರ್ಷದ ಬಜೆಟ್ ಆಗಿದ್ದರಿಂದ ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆಯನ್ನು ರಾಜ್ಯ ಬಿಜೆಪಿ ಸರಕಾರದ ಕೊನೆಯ ಬಜೆಟ್ ಮೇಲೆ ಹೊಂದಲಾಗಿತ್ತು. ಆದರೆ ದಶಕಗಳ ಕನಸು ಕನಸಾಗಿಯೆ ಉಳಿದಿದ್ದು ಹೆಚ್ಚಿನ ನಿರಾಸೆಯನ್ನು ಮೂಡಿಸುವ ಬದಲು ಸಮಾಧಾನಕರ ತೃಪ್ತಿ ಹೊಂದುವಂತೆ ಮಾಡಿದೆ

ದಶಕಗಳ ಬೇಡಿಕೆಯಾದ ಹಣ್ಣು-ತರಕಾರಿ ಶೀಥಲ ಗೃಹಗಳ ನಿರ್ಮಾಣ, ವೈನ್ ತಯಾರಿಕಾ ಘಟಕಗಳ ಸ್ಥಾಪನೆಯು ಪ್ರಸ್ತುತ ಬಜೆಟ್‌ನಲ್ಲಿಯು ಬೇಡಿಕೆಯಾಗಿ ಉಳಿದಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡದಿರುವುದು, ಈಗಾಗಲೇ ಘೋಷಣೆಗೊಂಡಿರುವ ನೂತನ ತಾಲೂಕುಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಪ್ರಸ್ತಾಪಿಸದಿರುವುದು ಈ ಭಾಗದ ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ.

ಜಿಲ್ಲೆಯ ರೈತರು ಹಾಲು, ರೇಷ್ಮೆ, ತರಕಾರಿ, ಹೂವು, ಹಣ್ಣು ಬೆಳೆಯುವುದರಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಹೂವು, ಹಣ್ಣು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅಗತ್ಯವಿರುವ ಮಾರುಕಟ್ಟೆ ನಿರ್ಮಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಲ್ಲಿ ಹಣ್ಣು, ತರಕಾರಿ, ಹೂವು ಶೇಖರಿಸಿಡುವ ಶೀತಲೀಕರಣ ಘಟಗಳಿಲ್ಲದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಬೆಂಗಳೂರಿಗೆ ಕೊಂಡೊಯ್ದು ಬಂದ ಬೆಲೆಗೆ ಮಾರಾಟ ಮಾಡಿ ಬರುವ ದುಸ್ಥಿತಿ ರೈತನಿಗಿದೆ. ಆದ್ದರಿಂದ ಶೀತಲೀಕರಣ ಘಟಕ ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬ ರೈತರ ಒತ್ತಾಯಕ್ಕೆ ಈ ಬಾರಿ ಸರ್ಕಾರ ಸ್ಪಂದಿಸಿಲ್ಲ.

ಜೊತೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದರೂ, ಜಿಲ್ಲೆಯಲ್ಲಿ ಒಂದೇ ಒಂದು ವೈನ್ ತಯಾರಿಕಾ ಘಟಕವಿಲ್ಲ. ಹಾಗಾಗಿ ದಲ್ಲಾಳಿಗಳ ಕಾಟ ಎದುರಿಸಲಾಗದೆ ಬಂದ ಬೆಲೆಗೆ ತೋಟದಲ್ಲಿಯೇ ದ್ರಾಕ್ಷಿ ಮಾರುವ ದುಸ್ಥಿತಿ ಎದುರಾಗಿದೆ. ವೈನ್ ತಯಾರಿಕಾ ಘಟಕ ಸ್ಥಾಪಿಸಿ ಸಮಸ್ಯೆ ಪರಿಹಾರಿಸಲು ಹಲವು ದಶಕಗಳಿಂದ ಬೆಳೆಗಾರರಿಂದ ಒತ್ತಾಯ ಕೇಳಿ ಬರುತ್ತಿದ್ದರೂ ಇದುವರೆಗೂ ಸಾಕಾರಗೊಂಡಿಲ್ಲ.

ಈ ಹಿಂದೆ ಘೋಷಣೆಯಾಗಿದ್ದ ಮೊಬೈಲ್ ಬಿಡಿ ಭಾಗಗಳ ತಯಾರಿಕಾ ಘಟಕದ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯ ಕುರಿತು ಮಾಡದಿರುವುದರಿಂದ ಬಹುದಿನಗಳ ಬೇಡಿಕೆಯು ಈಡೇರದೆ ನಿರುದ್ಯೋಗಿ ಯುವಕರಲ್ಲಿ ನಿರಾಸೆ ಮೂಡಿಸಿದೆ.

ಚಿಕ್ಕಬಳ್ಳಾಪುರಕ್ಕೆ ಸಿಕ್ಕ ಕೊಡುಗೆ ಏನು..?

ಎತ್ತಿನ ಹೊಳೆ ಯೋಜನೆಗೆ ಸಂಭಂಧಿಸಿದಂತೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರನ್ನು ಪೂರೈಸುವ ಕಾಮಗಾರಿಗಳ ಹಾಗೂ ಶ್ರೀನಿವಾಸಪುರ ಮತ್ತು ಕೋಲಾರ ಫೀಡರ್ ಚಾನೆಲ್‌ಗಳ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು, ಕೇಂದ್ರದ ಸಹಭಾಗಿತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‍ನ್ನು ಕಾರ್ಯರಂಭಗೊಳಿಸಲಾಗುವುದೆಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಪ್ರವಾಸೋದ್ಯಮಕ್ಕೆ ರೂಪ್ ವೇ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಪ್-ವೇ ನಿರ್ಮಾಣ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು.

ಬೋಗನಂಧೀಶ್ವರನಿಗೆ ಬೆಳಕು

ಜಿಲ್ಲೆಯ ಐತಿಹಾಸಿಕ ಭೋಗನಂದೀಶ್ವರ ದೇವಾಲಯಕ್ಕೆ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ತ್ರಿ ಡಿ ಪ್ರೋಜೆಕ್ಷನ್ ಮ್ಯಾಪಿಂಗ್, ಧ್ವನಿ ಮತ್ತು ಬೆಳಕು ಪ್ರದರ್ಶನ ಅಳವಡಿಸಲು ಅನುದಾನ ಘೋಷಣೆ

ಕೆ.ಸಿ. ವ್ಯಾಲಿಗೆ ಕ್ರಮ

ಕೆ.ಸಿ ವ್ಯಾಲಿ ಮತ್ತು ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಿ ಕೃಷಿಗೆ ಯೋಗ್ಯವನ್ನಾಗಿ ಮಾಡಲು 3 ನೇ ಹಂತದ ಮಾದರಿಯ ಸಂಸ್ಕರಣಾ ಕ್ರಮಗಳನ್ನು ಅಳವಡಿಸಲಾಗುವುದು.

ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ

ರಾಜ್ಯದಲ್ಲಿ ಪುಷ್ಪಗಳ ರಫ್ತಿಗೆ ವಿಫುಲ ಅವಕಾಶ ಇರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಅಂತರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣವನ್ನು ಪ್ರಸ್ತಾಪಿಸಲಾಗಿದೆ.

ಹೈಟೆಕ್ ರೇಷ್ಮೆ ಮಾರುಕಟ್ಟೆ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಏಷ್ಯಾದಲ್ಲಿಯೇ 2 ನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ. ರೂ,ಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುವುದು.

ಟೌನ್ ಶಿಪ್‌ಗೆ ನೆರವು

ಚಿಕ್ಕಬಳ್ಳಾಪುರ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಗಳನ್ನು ನಿರ್ಮಿಸಲು ಸರಕಾರ ಮತ್ತು ಖಾಸಗಿ ಸಹ ಭಾಗಿತ್ವದಲ್ಲಿ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಂದ ಎಕ್ಸ್ ಪ್ರೆಷನ್ ಆಫ್ ಇಂಟ್ರೆಸ್ಟ್ ಅನ್ನು ಆಹ್ವಾನಿಸಲಾಗಿದೆ. ಈ ಟೌನ್ ಶಿಪ್ ನಗರ ಯೋಜನೆಗೆ ಮತ್ತು ಹೊಸ ಉದ್ಯಮಗಳಿಗೆ ನೂತನ ಆಯಾಮ ನೀಡಲಿದೆ.

ಈ ಯೋಜನೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಬಯಲು ಸೀಮೆ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರಕ್ಕೆ ಈ ಬಾರಿ ಸಿಕ್ಕ ಕೊಡುಗೆಗಳಾಗಿದ್ದು, ಇವು ಬರೀ ಘೋಷಣೆಗಳಾಗಿ ಮಾತ್ರ ಉಳಿಯದೆ ಕಾರ್ಯರೂಪಕ್ಕೆ ಬರಲೆಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ.