ಆಮಿಷಕ್ಕೆ ಬಲಿಯಾಗಬೇಡಿ: ರಮೇಶ ಜಾರಕಿಹೊಳಿ

ಆಮಿಷಕ್ಕೆ ಬಲಿಯಾಗಬೇಡಿ: ರಮೇಶ ಜಾರಕಿಹೊಳಿ

ಹಿರೇಬಾಗೇವಾಡಿ: ಈ ಬಾರಿಯ ಚುನಾವಣೆ ಅತಿ ಮಹತ್ವದ್ದಾಗಿದ್ದು, ಯಾವ ಆಮಿಷಕ್ಕೂ ಬಲಿಯಾಗದೇ ಬೆಳಗಾವಿ ಗ್ರಾಮೀಣ ಶಾಸಕರನ್ನು ಸೋಲಿಸಲೇ ಬೇಕು. ಜತೆಗೆ ಕಾಂಗ್ರೆಸ್ ಸೋಲಿಸದಿದ್ದರೆ ಜನ ತಮ್ಮ ಮನೆ ಹಾಗೂ ಜಮೀನು ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ಮಾಡಿದರು.

ಗ್ರಾಮದ ಹೊರವಲಯದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಗುರುವಾರ ಆಯೋಜಿಸಿದ್ದ ಅಭಿಮಾನದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಶಾಸಕರು ರಸ್ತೆ, ಚರಂಡಿ ಮಾಡದ್ವಿ ಅಂತ ಹೇಳಿಕೊಂಡು ಹೋಗುತ್ತಿದ್ದಾರೆ. ರಸ್ತೆ, ಗಟಾರಗಳನ್ನು ಗ್ರಾ.ಪಂ, ನಗರ ಸಭೆ ಸದಸ್ಯರು ಮಾಡುತ್ತಾರೆ. ಎಲ್ಲ ಶಾಸಕರಿಗೆ ಅವರದೇ ಆದ ಅನುದಾನ ಇರುತ್ತದೆ ಅದೇನು ಮಹಾ ವಿಷಯ ಎಂದರು.

ನೀರಾವರಿ ಯೋಜನೆಯಲ್ಲಿ ಬಿಜೆಪಿ ಸರ್ಕಾರ ಗೋಲ್‌ಮಾಲ್ ಮಾಡಿದ್ದಾರೆಂದು ವಿರೋಧ ಪಕ್ಷದವರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಇಲ್ಲಿ ಒಂದು ಹೆಸರಿಗಷ್ಟೆ ಕೆರೆ ನಿರ್ಮಿಸಿ ನೂರಾರು ಕೋಟಿ ಹಣ ಗೋಲ್‌ಮಾಲ್ ಮಾಡಲು ಹೊರಟಿದ್ದರು. ಆದರೆ, ನಾವು ಅಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆರಂಭಿಸಲು ಮುಂದಾದೆವು. ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಎಂದೂ ವಿರೋಧಿಸಿಲ್ಲ. ಮುಂದಿನ ದಿನಗಳಲ್ಲಿ ಕೆರೆ ನಿರ್ಮಿಸುವ ಜವಾಬ್ದಾರಿ ನನ್ನದು. ಈಗಿನ ಶಾಸಕರು ಕೇವಲ ಕಮಿಷನ್‌ಗೆ ಸೀಮಿತವಾಗಿದ್ದಾರೆ ಎಂದರು.

ಟಿಎಪಿಸಿಎಂಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳಕರ, ಮಹಾಂತೇಶ ಅಲಾಬಾದಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ತಾ.ಪಂ ಸದಸ್ಯ ಮಹಾಂತೇಶ ಅಲಾಬಾದಿ, ಉಳವಪ್ಪ ನಂದಿ, ಪ್ರಶಾಂತ ದೇಸಾಯಿ, ಬಿ.ಎಸ್. ಗಾಣಗಿ, ವಿಜಯ ಮಠಪತಿ, ಬಸವರಾಜ ಕಡೆಮನಿ, ಸುರೇಶ ಗುರುವಣ್ಣವರ, ಕಲಾವತಿ ಧರೆಣ್ಣವರ, ಭಾರತಿ ಕೆಡೇಮನಿ, ಶೋಭಾ ಪಾಟೀಲ, ರಾಮಚಂದ್ರ ಮನ್ನೋಳಕರ ರಫಿಕ ಗೋಕಾಕ, ನೀಲಕಂಠ ಪಾರ್ವತಿ ಇದ್ದರು.