'ದೊಡ್ಡ'ದಾದ ಜಾತಿ-ಮೀಸಲಾತಿ ವಿವಾದ, ಐತಿಹಾಸಿಕ ದೇವಸ್ಥಾನದ ಟೆಂಡರೇ ರದ್ದು!

'ದೊಡ್ಡ'ದಾದ ಜಾತಿ-ಮೀಸಲಾತಿ ವಿವಾದ, ಐತಿಹಾಸಿಕ ದೇವಸ್ಥಾನದ ಟೆಂಡರೇ ರದ್ದು!

ಬೆಂಗಳೂರು: 'ಕಾಂತಾರ', 'ಹೆಡ್​ ಬುಷ್'​ ಸಿನಿಮಾಗಳ ವಿಚಾರವಾಗಿ ಧಾರ್ಮಿಕ ಹಾಗೂ ಸಾಮುದಾಯಿಕವಾಗಿ ವಿವಾದಗಳೆದ್ದು ಬಹಳಷ್ಟು ಚರ್ಚೆಗಳಾಗಿದ್ದವು. ಇದೀಗ ಧಾರ್ಮಿಕ ಕೇಂದ್ರಕ್ಕೂ ಅಂಥದ್ದೇ ವಿವಾದ ವ್ಯಾಪಿಸಿ, ಆ ವಿಚಾರ 'ದೊಡ್ಡ'ದಾದ ಹಿನ್ನೆಲೆಯಲ್ಲಿ ಐತಿಹಾಸಿಕ ದೇವಸ್ಥಾನವೊಂದರ ಟೆಂಡರ್​ ರದ್ದುಗೊಂಡಿದೆ.

ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್​ ಆಹ್ವಾನ ವಿವಾದಕ್ಕೆ ಒಳಗಾಗಿದ್ದು, ಟೆಂಡರ್ ಆಹ್ವಾನದ ನೋಟಿಸ್ ಪ್ರಕಟಗೊಂಡ ದಿನವೇ ಅದು ರದ್ದುಗೊಂಡಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಈ ಟೆಂಡರ್​ ಆಹ್ವಾನ ಪ್ರಕಟಗೊಂಡಿತ್ತು.

ದೇವಸ್ಥಾನದಲ್ಲಿ ಪೂಜಾಸಾಮಗ್ರಿಗಳ ಮಾರಾಟ ಸ್ಥಳ, ಈಡುಗಾಯಿ ಆಯ್ದುಕೊಳ್ಳುವ ಹಕ್ಕು, ಎಳನೀರು ಮಾರಾಟ, ಖಾಲಿ ಜಾಗದಲ್ಲಿ ಮೆರಿಗೊ ರೌಂಡ್ ಮತ್ತು ಸುಂಕ ವಸೂಲಾತಿ, ಪಾದರಕ್ಷೆ ಕಾಯ್ದುಕೊಳ್ಳುವ ಕೇಂದ್ರಗಳ ಸಲುವಾಗಿ ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳಿಗೆ ಸಂಬಂಧಿಸಿ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಪಾದರಕ್ಷೆ ಕಾಯ್ದುಕೊಳ್ಳುವುದನ್ನು ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೀಮಿತಗೊಳಿಸಲಾಗಿದ್ದು, ಉಳಿದಿದ್ದನ್ನು ಸಾಮಾನ್ಯ ವರ್ಗದ ಮೀಸಲಾತಿಗೆ ಅನ್ವಯಿಸಿ ಟೆಂಡರ್​ ಕರೆಯಲಾಗಿತ್ತು. ಆದರೆ ಪಾದರಕ್ಷೆ ಕಾಯ್ದುಕೊಳ್ಳುವುದನ್ನು ಮಾತ್ರ ಎಸ್​ಸಿ-ಎಸ್​ಟಿಗೆ ಸೀಮಿತಗೊಳಿಸಿ ಟೆಂಡರ್ ಕರೆದಿರುವ ಹಿನ್ನೆಲೆಯಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿವಾದ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಈ ಮೊದಲು ಪ್ರಕಟಿಸಿದ್ದ ಟೆಂಡರ್​ ಕಂ ಬಹಿರಂಗ ಹರಾಜನ್ನು ರದ್ದುಗೊಳಿಸಿರುವ ಕುರಿತಂತೆ ಪ್ರಕಟಣೆ ಹೊರಡಿಸಿದೆ.