₹32 ಲಕ್ಷದ ಮದ್ಯ ಗುಳುಂ: ನಾಲ್ವರು ಇನ್‌ಸ್ಪೆಕ್ಟರ್‌ ಸೇರಿ ಕಾನ್‌ಸ್ಟೆಬಲ್‌ ಅಮಾನತು

₹32 ಲಕ್ಷದ ಮದ್ಯ ಗುಳುಂ: ನಾಲ್ವರು ಇನ್‌ಸ್ಪೆಕ್ಟರ್‌ ಸೇರಿ ಕಾನ್‌ಸ್ಟೆಬಲ್‌ ಅಮಾನತು

ಖಾನಾಪುರ (ಬೆಳಗಾವಿ ಜಿಲ್ಲೆ): 'ಜಪ್ತಿ ಮಾಡಿದ್ದ ಮದ್ಯದ ಬಗ್ಗೆ ಸರಿಯಾದ ಲೆಕ್ಕ ನೀಡದೇ, ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಅಬಕಾರಿ ಇಲಾಖೆಯ ಇಬ್ಬರು ಇನ್‌ಸ್ಪೆಕ್ಟರ್‌, ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಒಬ್ಬ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ.

ಅಬಕಾರಿ ಇಲಾಖೆಯ ಖಾನಾಪುರ ಠಾಣೆಯ ಇನ್‌ಸ್ಪೆಕ್ಟರ್‌ ದಾವಲಸಾಬ್ ಸಿಂಧೋಗಿ, ಕಣಕುಂಬಿ ತನಿಖಾ ಠಾಣೆಯ ಇನ್‌ಸ್ಪೆಕ್ಟರ್‌ ಸದಾಶಿವ ಕೋರ್ತಿ, ಸಬ್‌ಇನ್‌ಸ್ಪೆಕ್ಟರ್‌ ಪುಷ್ಪಾ ಗಡಾದಿ, ಖಾನಾಪುರ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಜಯರಾಮ ಹೆಗಡೆ ಮತ್ತು ಕಣಕುಂಬಿ ತನಿಖಾ ಠಾಣೆಯ ಕಾನ್‌ಸ್ಟೆಬಲ್‌ ರಾಯಪ್ಪ ಮಣ್ಣಿಕೇರಿ ಅಮಾನತುಗೊಂಡವರು. ಅಬಕಾರಿ ಜಿಲ್ಲಾ ಉಪ ಆಯುಕ್ತರಾದ ಎಂ. ವನಜಾಕ್ಷಿ ಅವರು ಶುಕ್ರವಾರ ಅಮಾನತು ಆದೇಶ ಹೊರಡಿಸಿದ್ದಾರೆ.

ಘಟನೆ ವಿವರ: ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಚ್‌ 7ರಂದು ಜಾಂಬೋಟಿ- ಜತ್ತ ರಾಜ್ಯ ಹೆದ್ದಾರಿಯ ಮೋದೆಕೊಪ್ಪ ಬಳಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಂಟೇನರ್‌ ಹಿಡಿದಿದ್ದರು. ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಇರುವ 452 ಮದ್ಯದ (ವಿಸ್ಕಿ, ತಲಾ 180 ಎಂ.ಎಲ್‌) ಬಾಕ್ಸ್‌ಗಳ ಜಪ್ತಿ ಮಾಡಿದ್ದಾಗಿ ಮೇಲಧಿಕಾರಿಳಿಗೆ ಮಾಹಿತಿ ನೀಡಿದ್ದರು.

ಮದ್ಯದ ಬಾಕ್ಸ್‌ಗಳನ್ನು 12 ಚಕ್ರದ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಇನ್ನೂ ಹೆಚ್ಚಿನ ಮದ್ಯ ಇರಬಹುದು ಎಂದು ಅನುಮಾನಗೊಂಡ ಹಿರಿಯ ಅಧಿಕಾರಿಗಳ ತನಿಖೆ ನಡೆಸಿದರು. ಮದ್ಯ ಸಾಗಣೆ ಮಾಡಿದ ಗೋವಾದ ಕಾರ್ಖಾನೆಯನ್ನು ಸಂಪರ್ಕಿಸಿದರು. ಕಂಟೇನರ್‌ನಲ್ಲಿ ಒಟ್ಟು 750ಕ್ಕೂ ಹೆಚ್ಚು ಮದ್ಯದ ಬಾಕ್ಸ್‌ಗಳನ್ನು ಸಾಗಿಸಲಾಗುತ್ತಿತ್ತು ಎಂದು ಕಾರ್ಖಾನೆಯ ಮೂಲಗಳು ಖಚಿತಪಡಿಸಿದವು.

'ಇನ್ನೂ 301 ಮದ್ಯದ ಬಾಕ್ಸ್‌ಗಳ ಬಗ್ಗೆ ಅಧಿಕಾರಿಗಳು ಲೆಕ್ಕ ನೀಡಿಲ್ಲ. ಇವುಗಳ ಅಂದಾಜು ಬೆಲೆ ₹ 32 ಲಕ್ಷ ಆಗುತ್ತದೆ. ಅಧಿಕಾರಿಗಳೇ ಇದನ್ನು ಬೇರೆ ಕಡೆ ಸಾಗಿಸಿದ ಅನುಮಾನಗಳಿವೆ. ಹೀಗಾಗಿ, ಅಮಾನತು ಮಾಡಲಾಗಿದೆ' ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಐವರ ಮೇಲೂ ಕರ್ತವ್ಯ ಲೋಪ, ಮೋಸ, ವಂಚನೆಯ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿದೆ.