ಅಲುಗಾಡಲಾರಂಭಿಸಿದ ಬೊಮ್ಮಾಯಿ ಸಿಎಂ ಕುರ್ಚಿ..!

ಅಲುಗಾಡಲಾರಂಭಿಸಿದ ಬೊಮ್ಮಾಯಿ ಸಿಎಂ ಕುರ್ಚಿ..!

ಬೆಂಗಳೂರು,ನ.15- ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರತಿ ಪಕ್ಷ ಕಾಂಗ್ರೆಸ್, ಬಿಜೆಪಿ ವಿರುದ್ಧ ಹೋರಾಟವನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ಕುರಿತಾಗಿ ರಾಜ್ಯ ನಾಯಕರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಮಾಹಿತಿಯನ್ನು ಪಡೆದಿರುವ ದೆಹಲಿ ನಾಯಕರು ಮುಂದಿನ ದಿನಗಳಲ್ಲಿ ಇನ್ನು ಕೆಲವು ನಾಯಕರನ್ನು ರಾಷ್ಟ್ರ ರಾಜಧಾನಿಗೆ ಕರೆಸಿಕೊಂಡು ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲೇ ಬೆಂಗಳೂರು ಪ್ರತಿನಿಸುವ ಪ್ರಭಾವಿ ಸಚಿವರೊಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು.

ಇದರ ಬೆನ್ನಲ್ಲೇ ರಾಜ್ಯವನ್ನು ಪ್ರತಿನಿಸುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ಸಂಸದರು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರ ನಾಯಕರಿಂದ ಸದ್ದಿಲ್ಲದೆ ಅಭಿಪ್ರಾಯಗಳನ್ನು ಪಡೆಯಲು ಮುಂದಾಗಿದ್ದಾರೆ.

ವಾರದಲ್ಲಿ ಇಬ್ಬರನ್ನು ದೆಹಲಿಗೆ ಬರುವಂತೆ ಮೌಖಿಕ ಸೂಚನೆ ನೀಡಿರುವ ವರಿಷ್ಠರು ಬೊಮ್ಮಾಯಿ ಅವರನ್ನು 2023ರವರೆಗೆ ಮುಂದುವರೆಸಬೇಕೆ ಇಲ್ಲವೇ ಯಾವುದಾದರೊಂದು ಪ್ರಬಲ ಕಾರಣವಿಟ್ಟುಕೊಂಡು ತಲೆದಂಡ ಮಾಡಬೇಕೆ ಎಂಬುದರ ಬಗ್ಗೆಯೂ ಅಭಿಪ್ರಾಯ ಸಂಗ್ರಹವಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಶೆಟ್ಟರ್ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಆಗಮಿಸಿದ್ದರು. ದೆಹಲಿ ನಾಯಕರ ಭೇಟಿ, ಅಲ್ಲಿ ನಡೆದಿರುವ ಮಾತುಕತೆ ವಿವರಗಳು ಇತ್ಯಾದಿಗಳ ಬಗ್ಗೆ ಮಾಜಿ ಸಿಎಂ ಬಿಎಸ್‍ವೈಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

# ಈಶ್ವರಪ್ಪ ದೌಡು:
ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿಯಿಂದ ಬೆಂಗಳೂರಿಗೆ ಹಿಂತಿರುಗಿದ ಬೆನ್ನಲ್ಲೇ ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೂಡ ಯಾವುದೇ ಸಂದರ್ಭದಲ್ಲಿ ದೆಹಲಿಗೆ ದೌಡಾಯಿಸಲಿದ್ದಾರೆ ಎನ್ನಲಾಗುತ್ತಿದೆ.

ವರಿಷ್ಠರ ಸೂಚನೆ ಮೇರೆಗೆ ಈಶ್ವರಪ್ಪ ದೆಹಲಿಗೆ ಹಾರಲಿದ್ದು, ಪಕ್ಷದ ಮುಖಂಡರನ್ನು ಭೇಟಿಯಾಗಿ ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುವರು.

ಉಳಿದಂತೆ ಮುಂದಿನ ದಿನಗಳಲ್ಲಿ ಇನ್ನು ಕೆಲವು ಸಚಿವರು ಮತ್ತು ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಲಿರುವ ವರಿಷ್ಠರು ಬೊಮ್ಮಾಯಿ ಅವರ ಭವಿಷ್ಯದ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಿದ್ದಾರೆ.
ಈಗಾಗಲೇ ಅವರ ಬಗ್ಗೆ ಇರುವ ಪರ ಮತ್ತು ವಿರೋಧದ ಅಭಿಪ್ರಾಯವು ರಾಜ್ಯ ಬಿಜೆಪಿ ಘಟಕದಿಂದ ವರದಿಗಳ ಸಮೇತ ದೆಹಲಿಗೆ ತಲುಪಿಸಲಾಗಿದೆ.

ಬೊಮ್ಮಾಯಿ ಅವರು ಪಕ್ಷದ ಮೂಲ ನಿವಾಸಿಗಳನ್ನು ಕಡೆಗಣಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂದವರಿಗೆ ಮನ್ನಣೆ ನೀಡುತ್ತಿರುವುದನ್ನು ರಾಜ್ಯ ಘಟಕ ವರಿಷ್ಠರ ಗಮನಕ್ಕೆ ತಂದಿದೆ.

ಮೊದಲ ಎರಡೂವರೆ ತಿಂಗಳು ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನಡೆಸಿದ್ದರು. ಅವರ ಮೇಲೆ ಯಾವುದೇ ಗುರುತರ ಆರೋಪಗಳಿರಲಿಲ್ಲ. ಆದರೆ ಬಿಟ್ ಕಾಯಿನ್ ಪ್ರಕರಣದಲ್ಲಿ ಅವರು ವಿವಾದಕ್ಕೆ ಸಿಲುಕಿರುವುದರಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಿದೆ ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿಯೇ ರಾಜ್ಯ ನಾಯಕರಿಂದ ಬಿಜೆಪಿ ವರಿಷ್ಠರ ಯಾರಿಗೂ ಗೊತ್ತಾಗದಂತೆ ಸದ್ದುಗದ್ದಲವಿಲ್ಲದೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.