ಕೋವಿಡ್‌ ಟೂಲ್‌ಕಿಟ್‌ ಪ್ರಕರಣ: ಟ್ವಿಟರ್‌ ಎಂಡಿಯನ್ನು ಪ್ರಶ್ನಿಸಿದ ದೆಹಲಿ ಪೊಲೀಸರು

ಕೋವಿಡ್‌ ಟೂಲ್‌ಕಿಟ್‌ ಪ್ರಕರಣ: ಟ್ವಿಟರ್‌ ಎಂಡಿಯನ್ನು ಪ್ರಶ್ನಿಸಿದ ದೆಹಲಿ ಪೊಲೀಸರು

ನವದೆಹಲಿ: 'ಕೋವಿಡ್‌ ಟೂಲ್‌ಕಿಟ್‌' ಪ್ರಕರಣದ ತನಿಖೆಯ ಭಾಗವಾಗಿ ಕಳೆದ ತಿಂಗಳು ಟ್ವಿಟರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನಿಷ್‌ ಮಹೇಶ್ವರಿ ಅವರನ್ನು ದೆಹಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರು ಹೆಚ್ಚಿನ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ, ಬಳಕೆದಾರರು ಟ್ವಿಟ್‌ಗಳನ್ನು 'ಮ್ಯಾನಿಪ್ಯುಲೇಟೆಡ್‌ ಮೀಡಿಯಾ' ಅಂದರೆ ತಿರುಚುವುದಕ್ಕೆ ಸಂಬಂಧಿಸಿ, ಕಂಪನಿಯ ನೀತಿಯ ಬಗ್ಗೆಯೂ ಅವರನ್ನು ಪ್ರಶ್ನಿಸಲಾಗಿದೆ ಎಂದು ಹೇಳಿದರು.

'ಕೋವಿಡ್‌-19 ಸಾಂಕ್ರಾಮಿಕ ರೋಗ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕಳಂಕ ತರಲು ಕಾಂಗ್ರೆಸ್‌ ಈ ಟೂಲ್‌ಕಿಟ್‌ ತಯಾರಿಸಿದೆ' ಎಂದು ಬಿಜೆಪಿಯ ಸಂಬಿತ್‌ ಪಾತ್ರ ಟ್ವೀಟ್‌ ಮಾಡಿದ್ದರು. ಪಾತ್ರ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ವೀಟರ್‌, 'ಪಾತ್ರ ಅವರು ತಿರುಚಿರುವ ಹಾಗೂ ಖಚಿತ ದಾಖಲೆಗಳಿಲ್ಲದ ಟೂಲ್ ಕಿಟ್ ಹಂಚಿಕೊಂಡಿದ್ದಾರೆ' ಎಂದು ಹೇಳಿತ್ತು. ಈ ಬೆಳವಣಿಗೆಗಳ ನಂತರ, ಪೊಲೀಸರು ಟ್ವಿಟರ್‌ ಎಂಡಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ತಂಡವನ್ನು ಮೇ 31 ರಂದು ಬೆಂಗಳೂರಿಗೆ ಕಳುಹಿಸಲಾಗಿದ್ದು, ಅಲ್ಲಿ ಮಹೇಶ್ವರಿಯನ್ನು ಪ್ರಶ್ನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.