ಎರಡು ದಿನ ಕಂಪ್ಲೀಟ್​ ಲಾಕ್​ಡೌನ್​ ಮಾಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸಲಹೆ

ಎರಡು ದಿನ ಕಂಪ್ಲೀಟ್​ ಲಾಕ್​ಡೌನ್​ ಮಾಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸಲಹೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏರಿಕೆ ಆಗುತ್ತಿರುವ ವಾಯುಮಾಲಿನ್ಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್,​ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ವಾಯ ಗುಣಮಟ್ಟ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಲಾಕ್​ಡೌನ್​ ಮಾಡುವಂತೆ ಸಲಹೆ ನೀಡಿದೆ.

ನಗರದಲ್ಲಿ ವಾಯುಮಾಲಿನ್ಯ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಬಗ್ಗೆ ಕಾಳಜಿ ತೋರಿರುವ ದೆಹಲಿಯ 17 ವರ್ಷದ ವಿದ್ಯಾರ್ಥಿ ಆದಿತ್ಯ ದುಬೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾ ಡಿ.ವೈ. ಚಂದ್ರಚೂಡ್​ ಮತ್ತು ಸೂರ್ಯಕಾಂತ್​ ನೇತೃತ್ವದ ವಿಶೇಷ ನ್ಯಾಯಪೀಠವೂ ಇಂದು ಅರ್ಜಿ ವಿಚಾರಣೆ ನಡೆಸಿ, ವಾಯು ಮಾಲಿನ್ಯ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.

ನಗರದಲ್ಲಿ ಎಂಥಾ ಪರಿಸ್ಥಿತಿ ಇದೆ ಎಂಬುದನ್ನು ನಾವು ನೋಡಿದ್ದೇವೆ. ಮನೆಯ ಒಳಗಡೆ ಇದ್ದಾಗಲೂ ಮಾಸ್ಕ್​ ಧರಿಸುವ ಸ್ಥಿತಿ ಇದೆ ಎಂದು ನ್ಯಾಯಮೂರ್ತಿ ಎನ್​.ವಿ. ರಮಣ ಅವರು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಪರ ಮಾತನಾಡಿದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮದೇ ರೀತಿಯಲ್ಲಿ ವಾಯುಮಾಲಿನ್ಯ ವಿರುದ್ಧ ಹೋರಾಡುತ್ತಿವೆ. ಸರ್ಕಾರಗಳು ತೆಗೆದುಕೊಂಡ ಕ್ರಮಗಳ ಸಂಕ್ಷಿಪ್ತ ಸಾರಾಂಶವನ್ನು ನಾವು ಸಲ್ಲಿಸಿದ್ದೇವೆ ಎಂದರು.

ಬೆಳೆ ಕಡ್ಡಿಯನ್ನು ಕೊಳೆಯುವಂತೆ ಮಾಡಲು ಸಿತು ಕ್ರಾಪ್​ ಸ್ಟಬ್ಬಲ್​ ಮ್ಯಾನೇಜ್​ಮೆಂಟ್​ನಲ್ಲಿ ಎರಡು ಲಕ್ಷ ಯಂತ್ರಗಳಿವೆ. ಶಾಸನಬದ್ಧ ಆಯೋಗವು ಬಯೋಮಾಸ್ ಪ್ಲಾಂಟ್‌ಗಳಲ್ಲಿ ಸ್ಟಬಲ್ ಅನ್ನು ಬಳಸಲು ಅನುಮತಿ ನೀಡಿದೆ. ಆದರೆ, ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೆಹ್ತಾ ಹೇಳಿದರು. ಇದೇ ಸಂದರ್ಭದಲ್ಲಿ ಪಂಜಾಬ್​ ಸರ್ಕಾರ ಗುರಿಯಾಗಿಸಿದ ಮೆಹ್ತಾ, ಪಂಜಾಬ್​ನಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಹೊಗೆ ಬರುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಂಜಾಬ್​ ಸರ್ಕಾರ ಕೆಲಸ ಮಾಡಬೇಕೆಂದು ತಾಕೀತು ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ ರಮಣ ಅವರು 'ರೈತರೊಬ್ಬರೇ ಹೊಣೆ ಎಂಬಂತೆ ಬಿಂಬಿಸುತ್ತಿದ್ದೀರಿ. ಆದರೆ, ಶೇ.40 ದೆಹಲಿ ಜನರನ್ನು ನಿಯಂತ್ರಿಸಲು ಕ್ರಮಗಳು ಎಲ್ಲಿವೆ? ಪಟಾಕಿಗಳ ಬಗ್ಗೆ ಕ್ರಮ ಏನು? ವಾಹನ ಮಾಲಿನ್ಯಕ್ಕೆ ಕ್ರಮ ಏನು? ಎಂದು ಪ್ರಶ್ನಿಸಿದರು. ಅಲ್ಲದೆ, ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿದರು.