ಶೀಘ್ರ ಭಾರತ-ಚೀನಾ ನಡುವೆ ಮತ್ತೊಂದು ಸುತ್ತಿನ ಮಾತುಕತೆ

ಶೀಘ್ರ ಭಾರತ-ಚೀನಾ ನಡುವೆ ಮತ್ತೊಂದು ಸುತ್ತಿನ ಮಾತುಕತೆ

ನವದೆಹಲಿ, ನವೆಂಬರ್ 19: ಶೀಘ್ರದಲ್ಲೇ ಭಾರತ-ಚೀನಾ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಘರ್ಷಣೆಯ ಕೇಂದ್ರಬಿಂದು ಪ್ರದೇಶದಿಂದ ಸಂಪೂರ್ಣವಾಗಿ ಸೇನೆ ಹಿಂತೆಗೆತ ಉದ್ದೇಶದ ಸಾಧನೆಗೆ ಶೀಘ್ರದಲ್ಲಿಯೇ 14ನೇ ಸುತ್ತಿನ ಮಾತುಕತೆ ನಡೆಸಲು ಭಾರತ ಮತ್ತು ಚೀನಾ ಗುರುವಾರ ಒಪ್ಪಿಕೊಂಡಿವೆ.

ಭೂತಾನ್ ಗಡಿಯಲ್ಲಿ 4 ಹೊಸ ಗ್ರಾಮ ನಿರ್ಮಿಸಿದ ಚೀನಾ!

ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗೆ ಒಪ್ಪಿಗೆ ಬಿಟ್ಟರೆ ಬೇರೆ ಯಾವುದೇ ರೀತಿಯ ಮಹತ್ವದ ರೀತಿಯ ಸಂದೇಶ ಸಭೆಯಿಂದ ಹೊರಬಿದ್ದಿಲ್ಲ. ದ್ವಿಪಕ್ಷೀಯ ಒಪ್ಪಂದಗಳಿಗೆ ಸಂಪೂರ್ಣವಾಗಿ ಬದ್ಧರಾಗಿರುವಂತೆಯೇ, ಉಳಿದಿರುವ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸಲು ಅಗತ್ಯವಾದ ಪರಿಹಾರ ಕಂಡುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿರುವುದಾಗಿ ಎಂಇಎ ಹೇಳಿದೆ.

ಮುಂದೆ ಯಾವುದೇ ರೀತಿಯ ಅಹಿತರ ಘಟನೆ ನಡೆಯದಂತೆ ಸುರಕ್ಷಿತ ಪರಿಸ್ಥಿತಿ ಖಾತ್ರಿಗೆ ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವೀಪಕ್ಷೀಯ ಒಪ್ಪಂದದಂತೆ ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಸಂಘರ್ಷದ ಎಲ್ಲಾ ಪ್ರದೇಶಗಳಿಂದ ಸಂಪೂರ್ಣವಾಗಿ ಸೇನೆ ಹಿಂತೆಗೆತ ಗುರಿ ಸಾಧನೆಗೆ ಮುಂದಿನ ಸುತ್ತಿನ (14) ಹಿರಿಯ ಕಮಾಂಡರ್ಸ್ ಸಭೆಗೆ ಶೀಘ್ರವೇ ದಿನಾಂಕ ನಿಗದಿಗೆ ಸಭೆಯಲ್ಲಿ ಉಭಯ ಕಡೆಗಳಿಂದ ಒಪ್ಪಿಕೊಂಡಿರುವುದಾಗಿ ಎಂಇಎ ತಿಳಿಸಿದೆ.

ಕಳೆದ ವರ್ಷದ ಜೂನ್ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಮಾರಕ ಘರ್ಷಣೆಯ ನಂತರ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಸರಣಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಫಲವಾಗಿ ಪಾಂಗಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆ ಹಾಗೂ ಗೋಗ್ರಾ ಪ್ರದೇಶದಿಂದ ಸಂಪೂರ್ಣವಾಗಿ ಸೇನೆ ಹಿಂತೆಗೆತ ಪ್ರಕ್ರಿಯೆಯನ್ನು ಉಭಯ ದೇಶಗಳು ಪೂರ್ಣಗೊಳಿಸಿವೆ. ಆದಾಗ್ಯೂ. ಪ್ರಸ್ತುತ ಉಭಯ ದೇಶಗಳ ಸುಮಾರು 50 ಸಾವಿರದಿಂದ 60 ಸಾವಿರ ಪಡೆಗಳು ಎಲ್ ಎಸಿಯ ಸೂಕ್ಷ್ಮ ವಲಯದಲ್ಲಿವೆ.

ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಮತ್ತು ಸಮನ್ವಯತೆಗಾಗಿ ಕೆಲಸದ ಕಾರ್ಯವಿಧಾನ (ಡಬ್ಲ್ಯೂಎಂಸಿಸಿ) ವರ್ಚುಯಲ್ ಸಭೆಯಲ್ಲಿ ಉಭಯ ಕಡೆಗಳಲ್ಲಿ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗಿದ್ದು, ಅಕ್ಟೋಬರ್ 10 ರಂದು ನಡೆದಿದ್ದ ಕಳೆದ ಬಾರಿಯ ಮಿಲಿಟರಿ ಮಾತುಕತೆಯಿಂದ ಈವರೆಗೂ ಆಗಿರುವ ಅಭಿವೃದ್ಧಿಗಳ ಪರಾಮರ್ಶೆ ನಡೆಸಲಾಗಿದೆ.

ಉತ್ತರ ವಲಯದಲ್ಲಿ ಲಾಜಿಸ್ಟಿಕ್ಸ್ ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಬುಧವಾರ ಜಂಟಿ ಸಮರಾಭ್ಯಾಸ ನಡೆಸಿದವು. ಈ ಕಾರ್ಯಾಚರಣೆಗೆ 'ಆಪರೇಷನ್ ಹರ್ಕ್ಯುಲಸ್' ಎಂದು ಹೆಸರಿಸಡಲಾಗಿತ್ತು.

ಈ ಪ್ರಯತ್ನವು ಭಾರತೀಯ ವಾಯುಪಡೆಯ ಅಂತರ್ಗತ ಹೆವಿ-ಲಿಫ್ಟ್ ಸಾಮರ್ಥ್ಯದ ವಾಸ್ತವ ಪ್ರದರ್ಶನವಾಗಿದೆ. ಈ ಹಿಂದೆ ಯಾವುದೇ ಆಕಸ್ಮಿಕ ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ.

ಏರ್ ಲಿಫ್ಟ್ ಗಾಗಿ ಸಿ-17, ಐಎಲ್ -76 ಮತ್ತು ಎಎನ್ -32 ವಿಮಾನಗಳನ್ನು ಬಳಸಲಾಯಿತು. ಇವುಗಳು ಪೂರ್ವ ಏರ್ ಕಮಾಂಡ್ ವಾಯುನೆಲೆಯಿಂದ ಟೇಕ್ ಆಫ್ ಆದವು. ಮುಂದಿನ 4-5 ತಿಂಗಳುಗಳವರೆಗೆ ಭಾರತದ ಉಳಿದ ಪ್ರದೇಶಗಳಿಂದ ಈ ಪ್ರದೇಶ ಕಡಿತಗೊಳ್ಳುವುದರಿಂದ ಸಾಕಷ್ಟು ಪಡಿತರ, ಸಂಪನ್ಮೂಲಗಳ ಅಗತ್ಯವಿದೆ.

ಭಾರತ ಮತ್ತು ಚೀನಾ ಕಡೆಯಿಂದ ಸುಮಾರು 60,000 ಸೈನಿಕರನ್ನು ನಿಯೋಜಿಸುವುದರೊಂದಿಗೆ ಮೇ 2020 ರಿಂದ ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಈ ಜಂಟಿ ಸಮರಾಭ್ಯಾಸ ನಡೆದಿದ್ದು, ಈ ಪ್ರದೇಶದಲ್ಲಿ ಟ್ಯಾಂಕ್‌ಗಳು, ಫಿರಂಗಿಗಳು, ಕ್ಷಿಪಣಿಗಳು ಮತ್ತು ಭಾರೀ ಉಪಕರಣಗಳನ್ನು ಇರಿಸಲಾಗಿದೆ.

ಕಳೆದ ತಿಂಗಳು ನಡೆದ ಎರಡು ಮಿಲಿಟರಿಗಳ ಕಾರ್ಪ್ಸ್ ಕಮಾಂಡರ್‌ಗಳ 13 ನೇ ಸುತ್ತಿನ ಮಾತುಕತೆಗಳಲ್ಲಿ ಒಮ್ಮತ ಮೂಡಿರಲಿಲ್ಲ. ಇದರಿಂದಾಗಿ ನಿಯೋಜನೆಗಳು ಮುಂದುವರೆದಿವೆ. ಮತ್ತೊಂದು ಬೆಳವಣಿಗೆಯಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್‌ಗುಪ್ತಾ ಅವರು ಈ ತಿಂಗಳ ಅಂತ್ಯದ ವೇಳೆಗೆ ಲೇಹ್ ಮೂಲದ ಹೊಸ ಕಾರ್ಪ್ಸ್ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.