ಮಾಡೆಲ್ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್ನೊಂದಿಗೆ ಹೋಟೆಲ್ ಮಾಲೀಕ ನಾಪತ್ತೆ
ಕೊಚ್ಚಿ: ಕೇರಳದ ಇಬ್ಬರು ಮಾಡೆಲ್ಗಳ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಪಘಾತಕ್ಕೂ ಮುನ್ನ ಹೋಟೆಲ್ನಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿಯ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಡಿಜೆ ಪಾರ್ಟಿಯು ಪೋರ್ಟ್ ಕೊಚ್ಚಿಯ ಹೋಟೆಲ್ ನಂಬರ್ 18 ಅಲ್ಲಿ ನಡೆದಿತ್ತು. ಪಾರ್ಟಿಯಲ್ಲಿ ಮಿಸ್ ಕೇರಳ ವಿಜೇತರಾಗಿದ್ದ ಮಾಡೆಲ್ಗಳಿಬ್ಬರು ಕೂಡ ಭಾಗವಹಿಸಿದ್ದರು. ಪಾರ್ಟಿಯ ನಂತರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿದಾಗ ಸಿಸಿಟಿವಿ ವಿಡಿಯೋ ಲಭ್ಯವಾಗಿರಲಿಲ್ಲ. ಸಿಸಿಟಿವಿ ದೃಶ್ಯಗಳಿರುವ ಡಿವಿಆರ್ ಅನ್ನು ಹೋಟೆಲ್ ಮಾಲೀಕರು ತೆಗೆದುಕೊಂಡು ಹೋಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಹೋಟೆಲ್ ಕೆಲಸಗಾರರ ವಿಚಾರಣೆ ವೇಳೆ ಇದು ಬಯಲಿಗೆ ಬಂದಿದೆ.
ಇನ್ನು ಅಪಘಾತ ಸ್ಥಳದ ಬಳಿ ವಶಕ್ಕೆ ಪಡೆದಿರುವ ಸಿಸಿಟಿವಿ ಫುಟೇಜ್ನಲ್ಲಿ ಮೃತ ಅನ್ಸಿ ಕಬೀರ್ ಮತ್ತು ಅಂಜನಾ ಶಾಜನ್ ಸವಾರಿ ಮಾಡಿದ್ದ ಕಾರಿನ ಹಿಂದೆ ಮತ್ತೊಂದು ಕಾರು ಚೇಸ್ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ. ಬಳಿಕ ಚೇಸ್ ಮಾಡಿದ ಕಾರನ್ನು ಪತ್ತೆ ಹಚ್ಚಿ, ಅದರಲ್ಲಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅನ್ಸಿ ಮತ್ತು ಆಕೆಯ ಸ್ನೇಹಿತರು ತುಂಬಾ ಕುಡಿದಿದ್ದರು ಎಚ್ಚರಿಕೆ ನೀಡಲು ಅವರನ್ನು ಹಿಂಬಾಲಿಸಿದೆವು ಎಂದು ಹೇಳಿದ್ದಾರೆ. ಆದಾಗ್ಯೂ ಚೇಸ್ ಮಾಡಿದವರು ಅದೇ ಪಾರ್ಟಿಯಲ್ಲಿ ಭಾಗವಹಿಸಿದ್ದರಾ? ಮತ್ತು ಅನ್ಸಿ ಮತ್ತು ಸ್ನೇಹಿತರ ನಡುವೆ ಏನಾದರೂ ಜಗಳ ನಡೆದಿದೆಯಾ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬಾರ್ ಮತ್ತು ಇತರೆ ಏರಿಯಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ಆದರೆ, ಹೋಟೆಲ್ ಮಾಲೀಕನ ಮೇಲೆ ಅನುಮಾನ ದಟ್ಟವಾಗಿದೆ. ಏಕೆಂದರೆ, ಡಿಜೆ ಪಾರ್ಟಿಯ ಸಿಸಿಟಿವಿ ಡಿವಿಆರ್ ಅನ್ನು ಮಾಲೀಕ ಮುಚ್ಚಿಟ್ಟಿದ್ದಾನೆ. ಅದರಲ್ಲೂ ಪಾರ್ಟಿ ಹಾಲ್ ಮತ್ತು ಪಾರ್ಕಿಂಗ್ ಹಾಲ್ ವಿಡಿಯೋ ತುಣಕಗಳೇ ಪ್ರಮುಖವಾಗಿ ಕಾಣೆಯಾಗಿವೆ. ಪಾರ್ಟಿ ಮುಗಿದ ತಕ್ಷಣವೇ ಅನ್ಸಿ ಮತ್ತು ಸ್ನೇಹಿತರು ಅಲ್ಲಿಂದ ಬೇಗ ಹೊರಟರು. ಇದುವರೆಗೂ ಎರಡು ಬಾರಿ ಹೋಟೆಲ್ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆಗೂ ಡಿವಿಆರ್ ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣದಲ್ಲಿ ಹೋಟೆಲ್ ಮಾಲೀಕನ ಪಾತ್ರ ಇರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಪೋರ್ಟ್ ಕೊಚ್ಚಿ ಪೊಲೀಸ್ ಠಾಣೆ ಎದುರೇ ಹೋಟೆಲ್ ಇದೆ. ಪಾರ್ಟಿ ಮುಗಿಸಿಕೊಂಡು ಅನ್ಸಿ ಕಬೀರ್, ಅಂಜನಾ ಶಾಜನ್, ಆಶಿಕ್ ಮತ್ತು ಅಬ್ದುಲ್ ರೆಹಮಾನ್ ಅಕ್ಟೋಬರ್ 31ರಂದು ಮನೆಗೆ ಬರುತ್ತಿದ್ದರು. ಈ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಸ್ ಕೇರಳ ವಿಜೇತರಾದ ಅನ್ಸಿ ಕಬೀರ್ ಮತ್ತು ಅಂಜನಾ ಶಾಜನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಶಿಕ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್ ರೆಹಮಾನ್ನನ್ನು ಮೊನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ ರೆಹಮಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.