ಕಿರುತೆರೆಯತ್ತ ನಟ ಅನಿರುದ್ಧ - ಇಂದು ನಿರ್ಮಾಪಕರ ಸಂಘದ ಮಹತ್ವದ ಸಭೆ

ಕಿರುತೆರೆಯತ್ತ ನಟ ಅನಿರುದ್ಧ - ಇಂದು ನಿರ್ಮಾಪಕರ ಸಂಘದ ಮಹತ್ವದ ಸಭೆ

ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರುವ ಕುರಿತು ತೀರ್ಮಾನ ತಗೆದುಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಿರಿಕ್ ಮಾಡಿದರು ಎನ್ನುವ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಅನಿರುದ್ಧ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಲಾಗಿತ್ತು. ಆದರೆ, ಘಟನೆ ನಡೆದ ಕೆಲವೇ ತಿಂಗಳಲ್ಲೇ ಅನಿರುದ್ಧ ಮತ್ತೊಂದು ಧಾರಾವಾಹಿಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಇಂದು ನಿರ್ಮಾಪಕರ ಸಂಘವು ಸಭೆ ಮಾಡಲಿದ್ದು, ಅಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ನಂತರ ನಟ ಅನಿರುದ್ಧ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧಗಾಗಿ ಯಾರೂ ಧಾರಾವಾಹಿ ಮಾಡಬಾರದು ಎಂದು ಅಲಿಖಿತ ಫಾರ್ಮಾನು ಹೊರಡಿಸಿತ್ತು. ಯಾವುದೇ ವಾಹಿನಿಗಳು ಕೂಡ ಇವರಿಗೆ ಕೆಲಸ ಕೊಡದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಚಿತ್ರಣ ಬೇರೆ ರೀತಿಯಲ್ಲೇ ಬದಲಾಗಿದೆ.  
ನಿರ್ಮಾಪಕರ ಸಂಘ ಮಾಡಿಕೊಂಡಿದ್ದ ಮನವಿಯನ್ನು ಉದಯವಾಹಿನಿ ತಳ್ಳಿಹಾಕಿದೆ. ಪರಿಣಾಮ ಸೂರ್ಯವಂಶ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಅನಿರುದ್ಧ ಅವರೇ ಸ್ಪಷ್ಟ ಪಡಿಸಿದ್ದಾರೆ. ತಾವು ಉದಯ ವಾಹಿನಿಯಲ್ಲಿ ಪ್ರಸಾರ ಕಾಣಲಿರುವ ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಬರೆದುಕೊಂಡಿದ್ದಾರೆ.
ಸೂರ್ಯವಂಶ ಹೆಸರನ್ನು ಕೇಳಿದ ತಕ್ಷಣವೇ ನೆನಪಾಗುವ ಕಲಾವಿದ ವಿಷ್ಣುವರ್ಧನ್. ಇದೀಗ ಅದೇ ಹೆಸರಿನಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗೆ ವಿಷ್ಣು ಅಳಿಯ ಅನಿರುದ್ಧ ನಾಯಕ. ಹೀಗಾಗಿ ಧಾರಾವಾಹಿ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಕುರಿತು ಕಿರುತೆರೆ ನಿರ್ಮಾಪಕ ಸಂಘ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕು. ಜೊತೆ ಜೊತೆಯಲಿ ಬಿಟ್ಟ ನಂತರ ಮತ್ತೊಂದು ಧಾರಾವಾಹಿಗೆ ನಾಯಕನಾಗಿರುವ  ಅನಿರುದ್ಧ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.