ದೈವದ ವಿಚಾರ ಇಟ್ಟುಕೊಂಡು ರೀಲ್ಸ್, ಅನುಕರಣೆ ಮಾಡುವುದು ಸರಿಯಲ್ಲ..!

ಕಾಂತಾರ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ. ಭಾರತೀಯರ ಮನಗೆದ್ದ ಕನ್ನಡಿಗನ ಹೆಮ್ಮಯ ಚಿತ್ರ ಇದೀಗ ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ದೇಶಾದ್ಯಂತ ಯಶಸ್ವಿ ಪ್ರದರ್ಶನದ ಬಳಿಕ ಕರಾವಳಿ ಸಂಪ್ರದಾಯದ ಕಥಾ ಹಂದರವೊಂದಿರುವ ಕಾಂತಾರ ತುಳು ಭಾಷೆಯಲ್ಲಿ ಬಿಡುಗಡೆಯಾಗಿ ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಹೌದು... ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದೆ. ಬಿಗ್ ಬಜೆಟ್ ಸಿನಿಮಾಗಳ ದಾಖಲೆಗಳನ್ನು ಧೂಳಿಪಟ ಮಾಡಿರುವ ಕಾಂತಾರ ಸದ್ಯ ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕಾಡು ಮತ್ತು ಸಂಪ್ರದಾಯದ ಕಥಾಹಂದರದ ನಡುವೆ ಮಾನವೀಯ ಮೌಲ್ಯಗಳನ್ನು ಸಾರುವ ದೈವಾರಾಧನೆ ಸಿನಿಮಾ ಭಾರತೀಯರ ಮೆಚ್ಚಿನ ಚಿತ್ರವಾಗಿ ಹೊರಹೊಮ್ಮಿದೆ. ಅಲ್ಲದೆ, ರಿಷಬ್ ನಿರ್ದೇಶನ ಮತ್ತು ನಟನೆಗೆ ಪ್ರೇಕ್ಷಕ ಮಹಾಶಯ ಸೈ ಎಂದಿದ್ದಾರೆ.
ಈಗಾಗಲೇ 400 ಕೋಟಿ ರೂ. ಕ್ಲಬ್ ಸೇರಿರುವ ಕಾಂತಾರ ಒಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇನ್ನು ದೈವಾರಾಧನೆ ಭಾಗವಾಗಿರುವ ಕಾಂತಾರ ಸಿನಿಮಾದಲ್ಲಿ ಪ್ರದರ್ಶನಗೊಂಡಿರುವ ದೈವ, ಗುಳಿಗ ಆರಾಧನೆಯಂತಹ ದೃಶ್ಯಗಳನ್ನು ಅನೇಕರು ಅನುಕರಣೆ ಮಾಡುತ್ತಿದ್ದಾರೆ. ಅಲ್ಲದೆ, ನೆಟ್ಟಿಗರು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇದೀಗ ಈ ಕುರಿತು ಮತ್ತೇ ರಿಷಬ್ ಶೆಟ್ಟಿ ಮನವಿಯೊಂದನ್ನು ಮಾಡಿದ್ದಾರೆ.
ದೈವಾರಾಧನೆ ಎನ್ನುವುದು ಭಕ್ತರು ಮತ್ತು ಭಕ್ತಿಗೆ ಸಂಬಂಧಪಟ್ಟಿದ್ದು. ಅದು ಆಚಾರ ವಿಚಾರಗಳನ್ನು ಒಳಗೊಂಡ ಒಂದು ಪರಿಶುದ್ಧ ಪ್ರಕ್ರಿಯೆ. ದಯವಿಟ್ಟು ಕಾಂತಾರ ಸಿನಿಮಾದಲ್ಲಿ ಪ್ರದರ್ಶನಗೊಂಡ ಯಾವುದೇ ದೈವದ ಪಾತ್ರವನ್ನು ರೀಲ್ಸ್ ಮಾಡುವುದು ಇಲ್ಲವೆ ವೇದಿಕೆಗಳ ಮೇಲೆ ಅನುಕರಣೆ ಮಾಡುವುದು ಸರಿಯಲ್ಲ. ಇದರಿಂದ ನಮ್ಮಂತಹ ಭಕ್ತರಿಗೆ ನೋವು ಉಂಟಾಗುತ್ತದೆ. ಅಲ್ಲದೆ, ದೈವಾರಾಧಕರ ಮನಸ್ಸಿಗೂ ಘಾಸಿಯುಂಟುಮಾಡುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.