'ಕೆಜಿಎಫ್' ಅನ್ನು ಮೀರಿಸುತ್ತಾ 'ವಿಕ್ರಾಂತ್ ರೋಣ'? ಸುದೀಪ್ ಹೇಳಿದ್ದು ಹೀಗೆ
ಯಾವುದೇ ಸಿನಿಮಾ ಹಿಟ್ ಅಥವಾ ಸೂಪರ್ ಹಿಟ್ ಆದರೆ ಆ ಸಿನಿಮಾದೊಂದಿಗೆ ಇತರೆ ಸಿನಿಮಾಗಳನ್ನು ಹೋಲಿಸಿ ನೋಡುವುದು ಸಾಮಾನ್ಯ. ಕನ್ನಡದ ಬಿಗ್ ಬಜೆಟ್ ಸಿನಿಮಾಗಳನ್ನು 'ಕೆಜಿಎಫ್'ಗೆ ಹೋಲಿಸಿ ನೋಡಲಾಗುತ್ತದೆ. ಕನ್ನಡದ ಮಾತ್ರವಲ್ಲ ಪರಭಾಷೆಯ ಸಿನಿಮಾಗಳನ್ನೂ ಸಹ 'ಕೆಜಿಎಫ್'ಗೆ ಹೋಲಿಸಿ ನೋಡಲಾಗುತ್ತಿದೆ.
ಇದೀಗ ನಟ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾವನ್ನು ಬಹಳ ದೊಡ್ಡ ಮಟ್ಟದಲ್ಲಿ ಮಾಡಿದ್ದು, ಈ ಸಿನಿಮಾ ಸಹ ಪ್ಯಾನ್ ಇಂಡಿಯಾ ಬಿಡುಗಡೆ ಕಾಣಲಿದೆ. ಬಹಳ ದೊಡ್ಡ ಕ್ಯಾನ್ವಾಸ್‌ನಲ್ಲಿ ಸಿನಿಮಾದ ನಿರ್ಮಾಣವಾಗಿದೆ.
ಸಿನಿಮಾವು ಫೆಬ್ರವರಿ 24ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ನಿಧಾನಕ್ಕೆ ಆರಂಭವಾಗಿದೆ. ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸುದೀಪ್‌ಗೆ ಅಭಿಮಾನಿಯೊಬ್ಬರು, 'ವಿಕ್ರಾಂತ್ ರೋಣ' ಸಿನಿಮಾ 'ಕೆಜಿಎಫ್' ಅನ್ನು ಮೀರಿಸುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಮತೋಲಿತ ಹಾಗೂ ಮೆಚ್ಚುಗೆ ಗಳಿಸುವ ಉತ್ತರವನ್ನು ಸುದೀಪ್ ನೀಡಿದ್ದಾರೆ. ಅವರ ಶ್ರಮ ಅವರದ್ದು, ನಮ್ಮ ಶ್ರಮ ನಮ್ಮದು: ಸುದೀಪ್
''ಯಾರೂ ಸಹ ಇನ್ನೊಬ್ಬರ ಸಿನಿಮಾವನ್ನು ಮೀರಿಸಬೇಕೆಂದು ಸಿನಿಮಾ ಮಾಡುವುದಿಲ್ಲ. ಅವರು (ಕೆಜಿಎಫ್) ಭಾರತೀಯ ಸಿನಿಮಾರಂಗದಲ್ಲಿ ಒಂದು ಸ್ಥಾನ ಸಂಪಾದನೆ ಮಾಡಿದ್ದಾರೆ ಎಂದರೆ ಅದಕ್ಕೆ ಅವರ ಶ್ರಮ ಕಾರಣ. ಅವರನ್ನು ಮೀರಿಸಬೇಕು ಎಂದುಕೊಳ್ಳುವುದು ನಿಮ್ಮ ಪ್ರತಿಭೆಯ, ಶ್ರಮದ ಸರಿಯಾದ ಪ್ರತಿಫಲ ಅಲ್ಲ ಎನಿಸುತ್ತದೆ. ನಮ್ಮ ಶ್ರಮವನ್ನು, ಕರ್ತವ್ಯವನ್ನು ನಾವು ಮಾಡಬೇಕು, ಅವರ ಕೆಲಸವನ್ನು ಅವರು ಮಾಡಿದ್ದಾರೆ'' ಎಂದಿದ್ದಾರೆ ಸುದೀಪ್.''ಖಂಡಿತವಾಗಿಯೂ ಕೆಲ ಬದಲಾವಣೆಗಳು ಕೆಜಿಎಫ್‌ನಿಂದ ಆಗಿವೆ''
'ಕೆಜಿಎಫ್' ಸಿನಿಮಾ ಕರ್ನಾಟಕ ಸಿನಿಮಾರಂಗಕ್ಕೆ ಬದಲಾವಣೆ ತಂದಿದೆಯೇ? ಎಂಬ ಪ್ರಶ್ನೆಗೆ ಹೌದೆಂದೇ ಉತ್ತರಿಸಿದರು ಸುದೀಪ್, ''ಕರ್ನಾಟಕ ಚಿತ್ರರಂಗದಕ್ಕೆ ಕೆಲ ಬದಲಾವಣೆಗಳನ್ನು ಕೆಜಿಎಫ್ ಖಂಡಿತವಾಗಿಯೂ ತಂದಿದೆ. ಒಂದು ಒಳ್ಳೆಯ ಕತೆಯನ್ನು ಇಟ್ಟುಕೊಂಡು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ಜನ ಖಂಡಿತ ನೋಡುತ್ತಾರೆ ಎಂಬುದನ್ನು 'ಕೆಜಿಎಫ್' ತೋರಿಸಿಕೊಟ್ಟಿದೆ. ಕೇವಲ ಹಣ ಖರ್ಚು ಮಾಡಿದರೆ ಜನ ನೋಡುತ್ತಾರೆ ಎಂದೇನೂ ಇಲ್ಲ. ಅವರ ಯೋಜನೆ ಚೆನ್ನಾಗಿತ್ತು, ಅವರ ಅಪ್ರೋಚ್ ಚೆನ್ನಾಗಿತ್ತು, ಅವರಿಗೆ ಒಳ್ಳೆಯ ಪ್ರತಿಫಲವೇ ಸಿಕ್ಕಿತು'' ಎಂದರು ಸುದೀಪ್.'ಕೆಜಿಎಫ್' ತಂಡದ ಪ್ರಾಮಾಣಿಕತೆಯಿಂದಾಗಿ ಎಲ್ಲ ಒದಗಿ ಬಂತು''
''ಕೆಜಿಎಫ್' ತಂಡದ ಟೈಮಿಂಗ್ ಸಹ ಬಹಳ ಚೆನ್ನಾಗಿತ್ತು. ತುಸು ಅದೃಷ್ಟ ಸಹ ಅವರ ಜೊತೆಗಿತ್ತು. 'ಕೆಜಿಎಫ್' ಸಿನಿಮಾದ ಜೊತೆಗೆ ದೊಡ್ಡ ಸಿನಿಮಾ ಒಂದು ಬಿಡುಗಡೆ ಆಯ್ತು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಚಿತ್ರತಂಡದ ಶ್ರಮ ಹಾಗೂ ಸಿನಿಮಾದ ಬಗ್ಗೆ ಅವರಿಗಿದ್ದ ಪ್ರಾಮಾಣಿಕತೆಯಿಂದ ಈ ಎಲ್ಲ ವಿಷಯಗಳು ಅವರಿಗೆ ಒದಗಿ ಬಂದವು. ಅಂತಿಮವಾಗಿ 'ವಿಕ್ರಾಂತ್ ರೋಣ' ಸಿನಿಮಾ 'ವಿಕ್ರಾಂತ್ ರೋಣ' ಸಿನಿಮಾವೇ, 'ಕೆಜಿಎಫ್' ಸಿನಿಮಾ 'ಕೆಜಿಎಫ್' ಸಿನಿಮಾವೇ. ಎರಡೂ ಸಿನಿಮಾಗಳನ್ನು ಹೋಲಿಸಲು ಸಾಧ್ಯವಿಲ್ಲ. 'ಕೆಜಿಎಫ್' ಸಿನಿಮಾ ಮಾಡಿರುವ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ, ಅಂತೆಯೇ 'ವಿಕ್ರಾಂತ್ ರೋಣ' ಬಗ್ಗೆಯೂ ಅವರು ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ'' ಎಂದಿದ್ದಾರೆ ಸುದೀಪ್.ಫೆಬ್ರವರಿ 24ಕ್ಕೆ ಸಿನಿಮಾ ಬಿಡುಗಡೆ 'ವಿಕ್ರಾಂತ್ ರೋಣ' ಸಿನಿಮಾವನ್ನು 'ರಂಗಿತರಂಗ' ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸುದೀಪ್, ನಿರೂಪ್ ಭಂಡಾರಿ, ಶ್ರದ್ಧಾ ಶ್ರೀನಾಥ್, ರವಿಶಂಕರ್, ನೀತಾ ಅಶೋಕ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಶೇಷ ಹಾಡೊಂದರಲ್ಲಿ ಕುಣಿದಿದ್ದಾರೆ. ಸಿನಿಮಾವು ಫೆಬ್ರವರಿ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. 'ಕೆಜಿಎಫ್' ನಂತರ ಕನ್ನಡದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಇದೆನ್ನಲಾಗುತ್ತಿದೆ. 'ವಿಕ್ರಾಂತ್ ರೋಣ' ಹತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿರುವುದು ವಿಶೇಷ. ಜೊತೆಗೆ 3ಡಿ ತಂತ್ರಜ್ಞಾನದಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.