ವಿಶ್ವದ ಅತಿ ಉದ್ದದ ನದಿಯಾನ ಹಡಗು 'ಗಂಗಾ ವಿಲಾಸ್'ಗೆ ಪ್ರಧಾನಿ ಚಾಲನೆ: ವಿಶೇಷತೆ, ಮಾರ್ಗ, ಪ್ರಯಾಣ ದರ ತಿಳಿಯಿರಿ

ವಾರಣಾಸಿ, ಜನವರಿ 13: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವರ್ಚುವಲ್ ಆಗಿ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ಕ್ರೂಸ್ ಹಡಗು ಗಂಗಾ ವಿಲಾಸ್‌ಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಹಲವಾರು ಇತರ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದೆ. ಇದು ರಿವರ್ ಕ್ರೂಸ್‌ನಲ್ಲಿ ಆತ್ಮನಿರ್ಭರ ಭಾರತದ ಸಂಕೇತವಾಗಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಗಾ ವಿಲಾಸ್ ಉತ್ತರ ಪ್ರದೇಶದ ವಾರಣಾಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ. ಇದು 51 ದಿನಗಳಲ್ಲಿ 3,200 ಕಿ.ಮೀ ದೂರವನ್ನು ಕ್ರಮಿಸಲಿದೆ.
ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತರ ಸಚಿವರು ಮತ್ತು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಹಡಗಿಗೆ ಚಾಲನೆ ನೀಡಲಾಗುತ್ತದೆ.
'ಗಂಗಾ ವಿಲಾಸ್ ತನ್ನ ಚೊಚ್ಚಲ ಯಾನದಲ್ಲಿ ಸ್ವಿಟ್ಜರ್ಲೆಂಡ್‌ನಿಂದ 32 ಪ್ರವಾಸಿಗರನ್ನು 27 ನದಿ ವ್ಯವಸ್ಥೆಗಳ ಮೂಲಕ ಹೊತ್ತೊಯ್ಯಲಿದೆ ಮತ್ತು ವಾರಣಾಸಿ, ಪಾಟ್ನಾ, ಕೋಲ್ಕತ್ತಾ, ಬಾಂಗ್ಲಾದೇಶದ ನದಿಯ ದಡದಲ್ಲಿರುವ ವಿವಿಧ ಪ್ರಮುಖ ಸ್ಥಳಗಳ ಮೂಲಕ ಪ್ರಯಾಣಿಸಲಿದೆ. ಗುವಾಹಟಿ ಮತ್ತು ಸಿಬ್ಸಾಗರ್/ದಿಬ್ರುಗಢವನ್ನೂ ಪ್ರವೇಶಿಸಲಿದೆ' ಎಂದು ಬಂದರು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಎಎನ್‌ಐಗೆ ತಿಳಿಸಿದರು.
'ಈ ಪ್ರಯಾಣವು ಭಾರತ ಮತ್ತು ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಪಾಲ್ಗೊಳ್ಳಲು ವಿದೇಶಿ ಪ್ರಯಾಣಿಕರಿಗೆ ಅವಕಾಶವನ್ನು ನೀಡುತ್ತದೆ' ಎಂದು ಸೋನೊವಾಲ್ ಹೇಳಿದರು.