ಕೈ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ; ಬುಧವಾರ ಪ್ರಕಟವಾಗಲಿದೆ ಫಲಿತಾಂಶ

ನವದೆಹಲಿ: ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ವೇದಿಕೆ ಸಜ್ಜುಗೊಂಡಿದ್ದು, ಸೋಮವಾರ ದೇಶಾದ್ಯಂತ ಮತದಾನ ನಡೆಯಲಿದೆ. ಬುಧವಾರ ಫಲಿತಾಂಶ ಪ್ರಕಟವಾಗಲಿದೆ. 137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು ಇದು 6ನೇ ಬಾರಿಯಾಗಿದ್ದು, 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದ ನಾಯಕ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾದರು. ಪ್ರಜಾಸತ್ತಾತ್ಮಕವಾಗಿ ಅಧ್ಯಕ್ಷರ ಆಯ್ಕೆ ನಡೆಯಬೇಕೆಂಬ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿತ್ತು.
9,000 ಮತದಾರರು: ಪ್ರದೇಶ ಕಾಂಗ್ರೆಸ್ ಸಮಿತಿಗಳ 9,000ಕ್ಕೂ ಅಧಿಕ ಪ್ರತಿನಿಧಿಗಳು ಚುನಾವಣೆಯಲ್ಲಿ ಮತದಾರರಾಗಿದ್ದಾರೆ. ಮಧುಸೂದನ ಮಿಸ್ತ್ರಿ ಚುನಾವಣಾಧಿಕಾರಿಯಾಗಿದ್ದಾರೆ.
ಟಿಕ್ ಮಾರ್ಕ್ಗೆ ಸೂಚನೆ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಮತಪತ್ರದಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಗಳ ಹೆಸರಿನ ಮುಂದೆ '1' ಬದಲು ಟಿಕ್ ಮಾರ್ಕ್ ಹಾಕಲು ಮತದಾರರಿಗೆ ಕೇಂದ್ರೀಯ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಸೂಚನೆ ನೀಡಿದ್ದಾರೆ. '1' ನಮೂದಿಸುವುದರಿಂದ ಗೊಂದಲ ಉಂಟಾಗಬಹುದು ಎಂದು ಅಭ್ಯರ್ಥಿ ಶಶಿ ತರೂರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಮತಪತ್ರದಲ್ಲಿ ಖರ್ಗೆ ಕ್ರಮ ಸಂಖ್ಯೆ '1' ಹಾಗೂ ತರೂರ್ ಕ್ರಮ ಸಂಖ್ಯೆ '2' ಆಗಿದೆ.
ಗೆಹ್ಲೋಟ್ ವಿಡಿಯೋಗೆ ತರೂರ್ ಆಕ್ಷೇಪ: ಮಲ್ಲಿಕಾರ್ಜುನ ಖರ್ಗೆ ಪರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಡಿಯೋ ಪ್ರಚಾರ ಮಾಡಿರುವುದನ್ನು ಶಶಿ ತರೂರ್ ವಿರೋಧಿಸಿದ್ದಾರೆ. ಶಾಸಕಾಂಗ ಪಕ್ಷವೊಂದರ ನಾಯಕರು ಅಭ್ಯರ್ಥಿ ಪರ ಬಹಿರಂಗವಾಗಿ ಒಲವು ವ್ಯಕ್ತಪಡಿಸಿರುವುದು ಪಕ್ಷದ ಚುನಾವಣಾ ಮಾರ್ಗಸೂಚಿಯ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.
ಪಕ್ಷದ ಹಿರಿಯ ನಾಯಕರು, ಪ್ರತಿನಿಧಿಗಳ ಒತ್ತಾಸೆಗೆ ಸ್ಪಂದಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದೆ. ಪ್ರತಿಸ್ಪರ್ಧಿ ಶಶಿ ತರೂರ್ ಬಗ್ಗೆ ಯಾವುದೇ ಹೇಳಿಕೆ ನೀಡಿ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಇದೊಂದು ಫ್ರೆಂಡ್ಲಿ ಫೈಟ್.
| ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಚುನಾವಣೆ ಸ್ಪರ್ಧಿ
ಕಾಂಗ್ರೆಸ್ ಚುನಾವಣೆ ಇತಿಹಾಸ
- 1939ರಲ್ಲಿ ಮಹಾತ್ಮಾ ಗಾಂಧಿ ಬೆಂಬಲಿತ ಅಭ್ಯರ್ಥಿ ಪಿ. ಸೀತಾರಾಮಯ್ಯ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಎದುರು ಸೋತಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ಅಧ್ಯಕ್ಷತೆಗೆ ನಡೆದ ಮೊದಲ ಚುನಾವಣೆ ಅದಾಗಿತ್ತು.
- ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ನ ಮೊದಲ ಆಂತರಿಕ ಚುನಾವಣೆ ನಡೆದದ್ದು 1950ರಲ್ಲಿ. ಪುರುಷೋತ್ತಮ ದಾಸ್ ಟಂಡನ್ ಮತ್ತು ಆಚಾರ್ಯ ಕೃಪಲಾನಿ ನಡುವೆ ನಡೆದ ಸ್ಪರ್ಧೆಯಲ್ಲಿ ಟಂಡನ್ ಗೆಲುವು ಸಾಧಿಸಿದ್ದರು.
- 1977ರಲ್ಲಿ ದೇವಕಾಂತ್ ಬರೂವಾ ರಾಜೀನಾಮೆ ನೀಡಿದ್ದರಿಂದ ನಡೆದ ಚುನಾವಣೆಯಲ್ಲಿ ಸಿದ್ಧಾರ್ಥ ಶಂಕರ್ ರಾಯ್ ಮತ್ತು ಕರಣ್ ಸಿಂಗ್ರನ್ನು ಸೋಲಿಸಿ ಕಾಸು ಬ್ರಹ್ಮಾನಂದ ರೆಡ್ಡಿ ಎಐಸಿಸಿ ಮುಖ್ಯಸ್ಥರಾಗಿ ಚುನಾಯಿತರಾಗಿದ್ದರು.
- 1997ರಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ರನ್ನು ಮಣಿಸಿ ಸೀತಾರಾಮ ಕೇಸರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
- 2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ನಡುವೆ ಸ್ಪರ್ಧೆ ಏರ್ಪಟ್ಟು, ಪ್ರಸಾದ್ ಹೀನಾಯ ಸೋಲು ಅನುಭವಿಸಿದರು. ಪಕ್ಷದ ಆಂತರಿಕ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಸದಸ್ಯರೊಬ್ಬರು ವಿರೋಧ ಎದುರಿಸಿದ್ದು ಅದೇ ಮೊದಲ ಸಲವಾಗಿತ್ತು.
ಬಳ್ಳಾರಿಯಲ್ಲಿ ರಾಹುಲ್ ವೋಟಿಂಗ್
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತದಾನ ಕೇಂದ್ರ ಇರಲಿದೆ. ಭಾರತ್ ಜೋಡೋ ಕಾರಣಕ್ಕೆ ಯಾತ್ರಿಗಳ ಅನುಕೂಲಕ್ಕಾಗಿ ಬಳ್ಳಾರಿ ಗಡಿಯ ಸಂಗನಕಲ್ಲು ಬಳಿ ವಿಶೇಷ ಮತಗಟ್ಟೆ ಸ್ಥಾಪಿಸುತ್ತಿದ್ದು, 40 ಮಂದಿಗೆ ಮಾತ್ರ ಅಲ್ಲಿ ಮತದಾನ ಮಾಡಲು ಅವಕಾಶ ಇರಲಿದೆ.ರಾಜ್ಯದಿಂದ 503 ಮಂದಿ ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದು, ಮೂವರು ಸಂಗನಕಲ್ಲು ಕ್ಯಾಂಪ್ನಲ್ಲಿ ಮತಚಲಾಯಿಸುವರು.
ಪಿಸಿಸಿ ಪ್ರತಿನಿಧಿಗಳು, ಅಧ್ಯಕ್ಷರು, ಕಾರ್ಯಾಧ್ಯಕ್ಷರು, ವಿಧಾನಸಭೆ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರು, ಎಐಸಿಸಿ ಪ್ರಧಾನಕಾರ್ಯದರ್ಶಿಗಳು ಮತದಾನ ಮಾಡಲಿದ್ದಾರೆ. ಉಳಿದವರೆಲ್ಲ ಬೆಂಗಳೂರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ. ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕೂಡ ಬೆಂಗಳೂರಿನಲ್ಲೇ ಮತ ಚಲಾಯಿಸಲಿದ್ದಾರೆ. ಕೆಪಿಸಿಸಿ ಹೊಸ ಕಟ್ಟಡದಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರಿಗೆ ಕ್ಯೂಆರ್ ಕೋಡ್ ಒಳಗೊಂಡ ಗುರುತಿನ ಚೀಟಿಯನ್ನು ಈಗಾಗಲೇ ವಿತರಿಸಲಾಗಿದೆ.