ಸಿರಿಧಾನ್ಯ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ: ಕೃಷಿ ವಿವಿ ಪ್ರೊ. ಕೆ.ಗೀತಾ

ಸಿರಿಧಾನ್ಯ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ: ಕೃಷಿ ವಿವಿ ಪ್ರೊ. ಕೆ.ಗೀತಾ

ಬೆಂಗಳೂರು: ಜಾಗತಿಕವಾಗಿ ಸಿರಿಧಾನ್ಯಗಳ ಬೆಳೆಯುವಿಕೆ ಮತ್ತು ಮಾರುಕಟ್ಟೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥೆ ಪ್ರೊ. ಕೆ.ಗೀತಾ ಹೇಳಿದ್ದಾರೆ.

'ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ- 2023' ಅಂಗವಾಗಿ ಕೇಂದ್ರ ವಾರ್ತಾ ಇಲಾಖೆ ಬೆಂಗಳೂರು ವಿಭಾಗದಿಂದ ಗುರುವಾರ ಆಯೋಜಿಸಿದ್ದ 'ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶ ಮತ್ತು ವೈವಿಧ್ಯಮಯ ಖಾದ್ಯಗಳು' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಿರಿಧಾನ್ಯ ಪದಾರ್ಥಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಭಾರತದಲ್ಲಿ ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯ ಕುರಿತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 36.1 ಇದೆ. ಇತರೆ ರಾಷ್ಟ್ರಗಳು ಶೇ.30.6 ಇದ್ದರೆ, ನೈಗರ್​ ಶೇ.11.5, ಚೀನಾ ಶೇ. 8.1, ನೈಜೀರಿಯಾ ಶೇ.7 ಹಾಗೂ ಮಾಲಿ ಶೇ.6.6 ಪಾಲು ಹೊಂದಿವೆ ಎಂದರು.

ಬಳಕೆಯಲ್ಲಿ ಹಿನ್ನಡೆ: ನಗರೀಕರಣ, ಹೆಚ್ಚುತ್ತಿರುವ ತಲಾ ಆದಾಯದಿಂದಾಗಿ ಗ್ರಾಹಕರ ರುಚಿ ಮತ್ತು ಆದ್ಯತೆ ಬದಲಾಗಿವೆ. ಇದರಿಂದಾಗಿ ದೇಶದಲ್ಲಿ ಸಂಸ್ಕರಿಸಿದ ಮತ್ತು ಸೇವಿಸಲು ಸಿದ್ಧವಾದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದರೂ ಸಿರಿಧಾನ್ಯಗಳ ಬಳಕೆಯಲ್ಲಿ ಹಿಂದಿದೆ. ಅಲ್ಲದೆ ಸಂಸ್ಕರಿಸಿದ ಆಹಾರ ಉತ್ಪನ್ನಗಳು ಹೆಚ್ಚಾಗಿ ಸೋಡಿಯಂ, ಸಕ್ಕರೆ, ಟ್ರಾನ್ಸ್​ ಕೊಬ್ಬು ಹಾಗೂ ಕಾಸಿರ್ನೋಜನ್​ಗಳನ್ನು ಹೊಂದಿವೆ. ಈ ಉತ್ಪನ್ನಗಳು ಕೇವಲ ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ಬೇಡಿಕೆ ಹೊಂದಿವೆ. ಇದರಿಂದ ತಾಯಂದಿರು ಮತ್ತು ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ, ಮಧುಮೇಹ ಮತ್ತು ಸ್ಥೂಲಕಾಯ ಸೇರಿ ನಾನಾ ಸಮಸ್ಯೆಗಳು ಹೆಚ್ಚುತ್ತಿದೆ ಎಂದು ವಿವರಿಸಿದರು.

ಸಿರಿಧಾನ್ಯಗಳ ಬಳಕೆಗೆ ಉತ್ತೇಜನ: ಆರ್ಕ, ಊದಲು, ಸಾಮೆ, ಬಿಳಿಜೋಳ, ಕೊರಲೆ, ಸಜ್ಜೆ, ರಾಗಿ, ಬರಗು, ನವಣೆ ಸೇರಿ ಸಿರಿಧಾನ್ಯಗಳಲ್ಲಿ ಉತ್ತಮ ಪೌಷ್ಟಿಕಾಂಶಗಳಿವೆ. ಇವುಗಳ ಸಮತೋಲಿತ ಬಳಕೆಯಿಂದ ಅಪೌಷ್ಟಿಕ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಿರುವ ಸರ್ಕಾರ ಇದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರೊ. ಕೆ.ಗೀತಾ ತಿಳಿಸಿದರು.

ಪ್ರಸ್ತಕ ಸಾಲಿನ ಅಂತಾರಾಷ್ಟ್ರೀಯ ಸಿರಿಧಾನ್ಯ ಸಮ್ಮೇಳನದಲ್ಲಿ ಉದ್ದಿಮೆದಾರರು, ವಿಷಯತಜ್ಞರು, ಅಂತಾರಾಷ್ಟ್ರೀಯ ಖರೀದಿದಾರರು ಭಾಗವಹಿಸಲಿದ್ದಾರೆ. ಇದೇ ವೇಳೆ ಎಪಿಇಡಿಎ ಪ್ರಾದೇಶಿಕ ಕಚೇರಿಯಲ್ಲಿ ಸಿರಿಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಆರೋಗ್ಯ ಪೂರ್ಣ ಜೀವನಕ್ಕೆ ಸಿರಿಧಾನ್ಯಗಳ ಬಳಕೆ ಕುರಿತು ಮಾಹಿತಿ ನೀಡಲಾಗುವುದು.
|ಆರ್​. ರವೀಂದ್ರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಎಪಿಇಡಿಎ ವ್ಯವಸ್ಥಾಪಕ ನಿರ್ದೇಶಕ