ಪೊಲೀಸರ ಹತ್ಯೆಗೆ ಯತ್ನ: ರೌಡಿ 'ಗೊಣ್ಣೆ' ಬಂಧನಕ್ಕೆ ತಂಡ ರಚನೆ

ಪೊಲೀಸರ ಹತ್ಯೆಗೆ ಯತ್ನ: ರೌಡಿ 'ಗೊಣ್ಣೆ' ಬಂಧನಕ್ಕೆ ತಂಡ ರಚನೆ

ಬೆಂಗಳೂರು: ಹೊಸಕೆರೆಹಳ್ಳಿ ಬಸ್ ತಂಗುದಾಣ ಬಳಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿರುವ ರೌಡಿ ವಿಜಯ್ ಅಲಿಯಾಸ್ ಗೊಣ್ಣೆ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

'ರೌಡಿಯಿಂದ ಹಲ್ಲೆಗೀಡಾಗಿರುವ ಕಾನ್‌ಸ್ಟೆಬಲ್‌ಗಳಾದ ನಾಗೇಂದ್ರ ತೇಲಿ, ಕಿರಣ್ ಮುಂದಿನಮನಿ ಹಾಗೂ ನೇತ್ರಾ ತೀವ್ರ ಗಾಯಗೊಂಡಿದ್ದಾರೆ.

ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

'ಮಹಿಳಾ ಕಾನ್‌ಸ್ಟೆಬಲ್ ನೇತ್ರಾ ಹೊಸಕೆರೆಹಳ್ಳಿ ಬಸ್ ತಂಗುದಾಣದ ಬಳಿ ಶುಕ್ರವಾರ ಮಧ್ಯಾಹ್ನ ಕರ್ತವ್ಯದಲ್ಲಿದ್ದರು. ನೋಂದಣಿ ಫಲಕವಿಲ್ಲದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ರೌಡಿ ಗೊಣ್ಣೆಯನ್ನು ಗುರುತಿಸಿ, ಹಿಡಿದುಕೊಳ್ಳಲು ಮುಂದಾಗಿದ್ದರು.'

'ಬಂಧನ ಭೀತಿಯಲ್ಲಿ ರೌಡಿ ಪರಾರಿಯಾಗಲು ಯತ್ನಿಸಿದ್ದ. ಗಸ್ತಿನ ಲ್ಲಿದ್ದ ನಾಗೇಂದ್ರ ತೇಲಿ ಹಾಗೂ ಕಿರಣ್ ಮುಂದಿನಮನಿ ರೌಡಿಯನ್ನು ಬೆನ್ನಟ್ಟಿ ಹಿಡಿದಿದ್ದರು. ಅದೇ ಸಮಯದಲ್ಲಿ ಕಾನ್‌ಸ್ಟೆಬಲ್‌ಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದ ರೌಡಿ ಗೊಣ್ಣೆ, ಹಲ್ಲೆ ಮಾಡಿದ್ದ. ನಂತರ, ಇಬ್ಬರೂ ಕಾನ್‌ಸ್ಟೆಬಲ್‌ಗಳಿಗೆ ಡ್ರ್ಯಾಗರ್‌ನಿಂದ ಇರಿದು ಕೊಲೆಗೆ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ' ಎಂದೂ ತಿಳಿಸಿವೆ.