ಬೆಂಗಳೂರಿನಲ್ಲಿ 'ಕಾಂತಾರ' ವೀಕ್ಷಿಸಿ ಮೆಚ್ಚಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

'ಕಾಂತಾರ' ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ ತಿಂಗಳಾಗಿದೆ. ಕರ್ನಾಟಕದಿಂದ ಆರಂಭ ಆಗಿದ್ದ ಆರ್ಭಟ ದೇಶದ ಉದ್ದಗಲಕ್ಕೂ ಹಬ್ಬಿತ್ತು. ಈಗ ವಿದೇಶದಲ್ಲೂ 'ಕಾಂತಾರ' ಅಬ್ಬರ ಜೋರಾಗಿದೆ. ಸಿನಿಪ್ರಿಯರಿಂದ ಹಿಡಿದು ಸೆಲೆಬ್ರೆಟಿಗಳೂ ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು.
(ನವೆಂಬರ್ 2) ಕಾಂತಾರ ಸಿನಿಮಾವನ್ನು ಕೇಂದ್ರ ಸರ್ಕಾರದ ಸಚಿವೆ ನಿರ್ಮಲಾ ಸೀತಾರಾಮ್ ವೀಕ್ಷಿಸಿದ್ದಾರೆ. ಬೆಂಗಳೂರಿನ ಗರುಡಾ ಮಾಲ್‌ನಲ್ಲಿ 'ಕಾಂತಾರ' ಸಿನಿಮಾ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.
ಕೆಲಸದ ಒತ್ತಡದ ನಡುವೆಯೂ 'ಕಾಂತಾರ' ಸಿನಿಮಾ ವೀಕ್ಷಣೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿ, ಚಿತ್ರತಂಡ ಹಾಗೂ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಟ್ವೀಟ್ ಮೂಲಕ ರಿಷಬ್ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. " ಸ್ವಯಂ ಸೇವಕರು ಹಾಗೂ ಹಿತೈಷಿಗಳೊಂದಿಗೆ ಕಾಂತಾರ ಸಿನಿಮಾ ನೋಡಿದೆ. ರಿಷಬ್ ಶೆಟ್ಟಿ ನೀವು ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದೀರಿ. ತುಳುವನಾಡು ಹಾಗೂ ಕರಾವಳಿ ಶ್ರೀಮಂತ ಸಂಪ್ರದಾಯವನ್ನು ಸಿನಿಮಾದಲ್ಲಿ ಸೆರೆ ಹಿಡಿದು ತೋರಿಸಿದ್ದೀರಿ" ಎಂದಿದ್ದಾರೆ.
ಕಾಂತಾರ' ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ನಲ್ಲಂತೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ನೋಡಿದ ಅನೇಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನವನ್ನು ಎಲ್ಲರೂ ಹೊಗಳಿದ್ದಾರೆ. ಈಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸರದಿ.
'ಕಾಂತಾರ' ಸಿನಿಮಾ ಕರ್ನಾಟಕ ಸೇರಿದಂತೆ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಅದ್ಭುತ ಗಳಿಕೆ ಕಾಣುತ್ತಿದೆ. ಇಂದಿಗೂ 'ಕಾಂತಾರ' ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಧಾವಿಸುತ್ತಿದ್ದಾರೆ.
'ಕಾಂತಾರ' ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ಮೋಡಿ ಮಾಡುತ್ತಿದೆ. ಸದ್ಯ ನಮ್ಮದೇ ಸಿನಿಮಾ 'ಕೆಜಿಎಫ್ ಚಾಪ್ಟರ್ 1'ರ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲಿಯೇ ಈ ಸಿನಿಮಾ 50 ಕೋಟಿ ರೂಪಾಯಿಯನ್ನು ಕೇವಲ ಬಾಲಿವುಡ್‌ನಲ್ಲಿಯೇ ಗಳಿಕೆ ಮಾಡುವ ಸಾಧ್ಯತೆಯಿದೆ.