ಪ್ರಧಾನ ಮಂತ್ರಿ ರಕ್ಷಣೆ ಹೊಣೆ ಯಾರದ್ದು..? ಪಿಎಂ ಭದ್ರತಾ ವ್ಯವಸ್ಥೆ ಕುರಿತು ಇಲ್ಲಿದೆ ಡಿಟೇಲ್ಸ್

ಪ್ರಧಾನ ಮಂತ್ರಿ ರಕ್ಷಣೆ ಹೊಣೆ ಯಾರದ್ದು..? ಪಿಎಂ ಭದ್ರತಾ ವ್ಯವಸ್ಥೆ ಕುರಿತು ಇಲ್ಲಿದೆ ಡಿಟೇಲ್ಸ್

ನಿನ್ನೆ ಪಂಜಾಬ್ ನಲ್ಲಾದ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ‌. ಭಾರತದ ಪ್ರಧಾನಿಯ ಭದ್ರತೆಯಲ್ಲಿ ಲೋಪವಾಗುವುದು ಸುಲಭವಲ್ಲ. ಏಕೆಂದರೆ ಅವರಿಗೆ ಒದಗಿಸುವುದು ವರ್ಲ್ಡ್ ಕ್ಲಾಸ್ ಸೆಕ್ಯುರಿಟಿ.‌ ಆದರೂ ಹಲವು ಕಾರಣಗಳಿಂದ ಈ ಲೋಪ ಉಂಟಾಗಿದೆ. ಈ ಘಟನೆಯ ಜೊತೆ ಜೊತೆಗೆ ಪ್ರಧಾನಿಯವರಿಗೆ ನೀಡುವ ಭದ್ರತೆ ಬಗ್ಗೆಯೂ ಚರ್ಚೆಯಾಗ್ತಿದೆ.

ಹಾಗಾದ್ರೆ ಪ್ರಧಾನಿಯವರ ಭದ್ರತೆ ಹೇಗಿರುತ್ತೆ, ಯಾರು ಈ ಪಡೆಯಲ್ಲಿರ್ತಾರೆ, ಕಾನ್ವಾಯ್ ಅಂದ್ರೆ ಏನು ಎಲ್ಲವನ್ನ ತಿಳಿದುಕೊಳ್ಳೋಣ.

ಪ್ರಧಾನಿಯವರಿಗೆ ಭದ್ರತೆ ನೀಡುವವರು ಯಾರು..?

ಎಸ್ಪಿಜಿ(SPG), ವಿಶೇಷ ರಕ್ಷಣಾ ಗುಂಪಿನ "ಬ್ಲೂ ಬುಕ್" ವಿಭಾಗಕ್ಕೆ ಪ್ರಧಾನಿಯವರ ಭದ್ರತೆಯ ಜವಾಬ್ದಾರಿಯಿದೆ. ಈ ವಿಭಾಗವನ್ನ ಕೇಂದ್ರ ಗೃಹ ಸಚಿವಾಲಯ ಮಾನಿಟರ್ ಮಾಡುತ್ತದೆ. ಕಾರ್ಯಕ್ರಮಕ್ಕೂ ಮುನ್ನ ಅಂದರೆ 72‌ ಗಂಟೆ ಮುಂಚೆಯೆ SPG ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪೂರ್ಣ ರಕ್ಷಣಾ ವ್ಯವಸ್ಥೆಯ ಕುರಿತು ಸಭೆ ನಡೆಸುತ್ತದೆ. ಕಾರ್ಯಕ್ರಮ ನಡೆಯುವ ಸ್ಥಳದಿಂದ ಹಿಡಿದು ಪ್ರಧಾನಿ ಚಲಿಸುವ ಮಾರ್ಗದ ಸಣ್ಣ ಸಣ್ಣ ವಿವರ ಸಂಗ್ರಹಿಸುತ್ತದೆ. ಈ ಸಭೆಯ ನಂತರ ಒಂದು ರಕ್ಷಣಾ ವರದಿ ತಯಾರಾಗುತ್ತದೆ, ಆ ವರದಿಯಂತೆಯೇ ಕಾರ್ಯನಿರ್ವಹಿಸಲಾಗುತ್ತದೆ.

ಮೊದಲು ಮಾಡಿದ ಯೋಜನೆಯಲ್ಲಿ ಬದಲಾವಣೆಯಾದರೆ..?

ನಿನ್ನೆ ಪ್ರಧಾನಿಯವರು ಹೆಲಿಕಾಪ್ಟರ್ ನಿಂದ ಕಾರ್ಯಕ್ರಮದ ಸ್ಥಳಕ್ಕೆ ತಲುಪಲು ಆಗಲಿಲ್ಲ. ಇಂತಾ ಪರಿಸ್ಥಿತಿಗಳಿಗೆ ಮೊದಲೆ ಪ್ಲಾನ್-ಬಿ ರೆಡಿಯಾಗಿರಬೇಕು. ಆ ರಾಜ್ಯದ ಸರ್ಕಾರಕ್ಕೆ ಈ ಪರ್ಯಾಯ ಯೋಜನೆಯ ಜವಾಬ್ದಾರಿ ಇರುತ್ತದೆ. ಎಸ್ಪಿಜಿ ಅಧಿಕಾರಿಗಳು ಪ್ರಧಾನಿಯವರ ಸನಿಹದಲ್ಲೆ ಇರುತ್ತಾರೆ. ಆ ರಾಜ್ಯದ ಪೊಲೀಸರು ಎಸ್ಪಿಜಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುತ್ತಾರೆ, ಆನಂತರವೇ ಪರ್ಯಾಯ ಮಾರ್ಗ ಸಿದ್ಧವಾಗುತ್ತದೆ. ಆ ಮಾರ್ಗ ಸಂಪೂರ್ಣ ಸ್ಯಾನಿಟೈಸ್ ಆಗಬೇಕು,‌ ಮಾರ್ಗದೆಲ್ಲೆಡೆ ರಕ್ಷಣೆ ಇರಬೇಕು.

ಪ್ರಧಾನಿಯವರ ಬೆಂಗಾವಲು ಪಡೆ

ಪಿಎಂ ಅವರ ಕಾನ್ವಾಯ್ ನಲ್ಲಿ 12 ಕಾರುಗಳು ಹಾಗೂ ಒಂದು ಆಯಂಬುಲೆನ್ಸ್ ಇರುತ್ತದೆ. ದಾಳಿಕಾರರ ಹಾದಿ ತಪ್ಪಿಸಲು, ಒಂದು ಜಾಮರ್ ಸಹ ಜೊತೆಗಿರುತ್ತದೆ. ಪ್ರಧಾನಿಯವರ ಕಾರಿನಂತಹ ಎರಡು ಡಮ್ಮಿ ಕಾರ್ ಗಳು ಇರುತ್ತವೆ. ಎನ್‌ಎಸ್ಜಿಯ ಬಂದೂಕುದಾರಿಗಳು ರಕ್ಷಣೆ ನೀಡುತ್ತಾರೆ. ಪ್ರಧಾನಿಯವರ ರಕ್ಷಣೆಗಾಗಿ‌ ನೂರು ಜನರ ಟೀಮ್ ಇರುತ್ತದೆ. ಅವರು ವಾಹನದಿಂದ ಇಳಿದು ಕಾರ್ಯಕ್ರಮದಲ್ಲಿ ಭಾಗಿಯಾಗಿರುವಾಗ ಯೂನಿಫಾರ್ಮ್ ಹಾಗೂ ಸಿವಿಲ್ ಡ್ರೆಸ್ ನಲ್ಲಿರುವ ಕಮ್ಯಾಂಡೋಸ್ ರಕ್ಷಣೆ ನೀಡುತ್ತಾರೆ.

ಪ್ರಧಾನಿ‌ ಮನೆಯಿಂದ ಹೊರಟಾಗ ರಕ್ಷಣಾ ವ್ಯವಸ್ಥೆ

ಪ್ರಧಾನಿಯವರ ಕಾನ್ವಾಯ್ ಹೊರಡುವ ರಸ್ತೆಯ ಮತ್ತೊಂದು ರೂಟ್ ಸಂಪೂರ್ಣ ಸ್ತಬ್ಧವಾಗುತ್ತದೆ. ಹತ್ತು ನಿಮಿಷಗಳವರೆಗೂ ಆ ರಸ್ತೆ ಜಾಮ್ ಆಗಿರುತ್ತದೆ. ಸ್ಥಳೀಯ ಪೊಲೀಸರು ಆ ರಸ್ತೆಗಳಲ್ಲಿ ಸೈರನ್ ನೊಂದಿಗೆ ಚಲಿಸುತ್ತಾರೆ. ಒಟ್ಟಿನಲ್ಲಿ ಝೀರೋ ಟ್ರಾಫಿಕ್ ನಲ್ಲಿ ಪ್ರಧಾನಿಯವರ ಕಾನ್ವಾಯ್ ಚಲಿಸುತ್ತದೆ.