ಭಾರತ ಭವಿಷ್ಯದ ಉತ್ಪಾದನಾ ಹಬ್; ಕನಸು ನನಸಾಗಿಸಲು ಕರ್ನಾಟಕ ಸಿದ್ಧ: ಜಿಮ್ನಲ್ಲಿ ಸಚಿವ ಹೆಬ್ಬಾರ್ ಪ್ರತಿಪಾದನೆ

ಬೆಂಗಳೂರು: ಪ್ರಸ್ತುತ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಭವಿಷ್ಯದಲ್ಲಿ ಜಾಗತಿಕ ಉತ್ಪಾದನಾ ಹಬ್ ಆಗುವ ಸರ್ವಸಾಮರ್ಥ್ಯವೂ ಭಾರತಕ್ಕಿದೆ, ಇದನ್ನು ಸಾಕಾರಗೊಳಿಸಲು ದೇಶಕ್ಕೆ ಸಾಥ್ ನೀಡಲು ಕರ್ನಾಟಕ ಸಜ್ಜಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಪ್ರತಿಪಾದಿಸಿದರು.
ನಗರದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, 2016ರಿಂದಲೂ ರಾಜ್ಯ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯ ಶೇ.63ರಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದೆ. ಮೊದಲ ಎಲೆಕ್ಟ್ರಿಕ್ ವಾಹನ ಸೇರಿದಂತೆ ವಿದ್ಯುತ್ ವಾಹನ ಕ್ಷೇತ್ರದಲ್ಲೂ ಹಲವು ಪ್ರಥಮಗಳಿಗೆ ರಾಜ್ಯ ಸಾಕ್ಷಿಯಾಗಿದೆ ಎಂದರು.
ಬಯೋಟೆಕ್ ಉತ್ಪನ್ನ ಮತ್ತು ರಫ್ತಿನಲ್ಲಿ ಮೊದಲು, ದೇಶದ ಎಲೆಕ್ಟ್ರಾನಿಕ್, ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಪ್ರಥಮ, ಹೀಗಾಗಿ ರಾಜ್ಯವೂ ತನ್ನ ಯೋಜನೆಗಳ ಮೂಲಕ ಈ ಕ್ಷೇತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಜಾಗತಿಕ ಹೂಡಿಕೆದಾರರಿಗೆ ಮಾಹಿತಿ ನೀಡಿದ ಸಚಿವ ಶಿವರಾಂ ಹೆಬ್ಬಾರ್, ಕೈಗಾರಿಕೆ ಮತ್ತು ಅಂತಾರಾಷ್ಟ್ರೀಯ ವಹಿವಾಟಿನಲ್ಲಿ 'ಉತ್ತಮ ಸಾಧನೆ' ಹಿರಿಮೆ ಜತೆಗೆ 'ಸುಲಭ ವ್ಯಾಪಾರ ಅವಕಾಶ'ಗಳಲ್ಲಿ (ಈಸ್ ಆಫ್ ಡೂಯಿಂಗ್ ಬಿಜಿನೆಸ್) ಉತ್ತಮ ಶ್ರೇಯಾಂಕ ಪಡೆದುಕೊಂಡಿದೆ ಎಂದು ವಿವರಿಸಿದರು.
ಸ್ಟಾರ್ಟಪ್ಗಳ ಸಾಲಿನಲ್ಲೂ ಕರ್ನಾಟಕ 'ಅತ್ಯುತ್ತಮ ಸಾಧಕ' ಎಂಬ ಹಿರಿಮೆಗೆ ಪಾತ್ರವಾಗಿದ್ದು, ಏಪ್ರಿಲ್ 21ರಿಂದ 2022ರ ಮಾರ್ಚ್ ಅವಧಿಯಲ್ಲಿ ರಾಜ್ಯವೂ ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಜಾಗತಿಕ ಸಾಂಕ್ರಾಮಿಕ ಕೋವಿಡ್ನಂತಹ ಸಂದರ್ಭದಲ್ಲೂ ದೇಶದ ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ.38ರಷ್ಟು ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲೂ ಇದೇ ಸ್ಥಾನ ಕಾಯ್ದುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರವು ಹತ್ತು ಹಲವು ಉದ್ಯಮಸ್ನೇಹಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನುಡಿದರು.
ಹೀಗಾಗಿಯೇ ದೇಶದಲ್ಲೇ ಮೊದಲು ಎನ್ನುವಂತಹ ಪ್ರಯತ್ನವನ್ನು ರಾಜ್ಯ ಮಾಡಿದ್ದು, ಉತ್ಪಾದನೆಗಳಿಗೆ ಅನುವಾಗುವಂತೆ ಪ್ರತ್ಯೇಕ ಕ್ಲಸ್ಟರ್ಗಳನ್ನು ಮಾಡಿಕೊಳ್ಳಲಾಗಿದೆ. ಇದರ ಭಾಗವಾಗಿ ಧಾರವಾಡದಲ್ಲಿ ಎಫ್‌ಎಂಸಿಜಿ, ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಯಾದಗಿರಿಯಲ್ಲಿ ಔಷಧ ಕ್ಲಸ್ಟರ್, ರಾಮನಗರದಲ್ಲಿ ಇ.ವಿ. ಕ್ಲಸ್ಟರ್ ಹೀಗೆ ಪ್ರತ್ಯೇಕ ಕ್ಲಸ್ಟರ್ಗಳ ನಿರ್ಮಾಣದ ಮೂಲಕ ಉದ್ದಿಮೆಗಳಿಗೆ ಹೊಸ ಹೊಸ ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ ಎಂದರು.
ಇಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ವಿದ್ಯುತ್ ಚಾಲಿತ ವಾಹನ ಕ್ಷೇತ್ರ, ತಂತ್ರಾಂಶ, ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯವು ಪ್ರತ್ಯೇಕ ನೀತಿಗಳನ್ನು ಹೊಂದಿದ್ದು, ಈ ನೀತಿ ನಿಯಮಗಳ ಅಡಿಯಲ್ಲಿ ರಾಜ್ಯವು ಉದ್ದಿಮೆದಾರ ಭರವಸೆಗಳನ್ನು ಈಡೇರಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ರಾಜ್ಯದಲ್ಲಿನ ಹೂಡಿಕೆ ಅವಕಾಶಗಳು ಮತ್ತು ಹೂಡಿಕೆಸ್ನೇಹಿ ವಾತಾವರಣದ ಬಗ್ಗೆ ಜಾಗತಿಕ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಕಾರ್ಮಿಕ ಇಲಾಖೆ ಅಕ್ರಂ ಪಾಷಾ, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಸಚಿವರೊಂದಿಗೆ ಉಪಸ್ಥಿತರಿದ್ದರು.