ದಳಪತಿ ವಿಜಯ್ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ? 'ಸಿಂಪಲ್​ ಸ್ಟಾರ್​'ಗೆ ಕಾಲಿವುಡ್​ನಲ್ಲಿ ಬೇಡಿಕೆ

ದಳಪತಿ ವಿಜಯ್ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ? 'ಸಿಂಪಲ್​ ಸ್ಟಾರ್​'ಗೆ ಕಾಲಿವುಡ್​ನಲ್ಲಿ ಬೇಡಿಕೆ
Rakshit Shetty | Thalapathy Vijay: 'ದಳಪತಿ 67' ಸಿನಿಮಾಗೆ ಲೋಕೇಶ್​ ಕನಗರಾಜ್​ ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ ಜೊತೆ ಈ ಚಿತ್ರತಂಡ ಮಾತುಕತೆ ನಡೆಸಿದೆ ಎಂದು ವರದಿ ಆಗಿದೆ.

ಕನ್ನಡದ ಸ್ಟಾರ್​ ನಟರಕ್ಷಿತ್​ ಶೆಟ್ಟಿ (Rakshit Shetty)ಅವರಿಗೆ ಈಗ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ.

ಕಳೆದ ವರ್ಷ ಅವರು ನಟಿಸಿದ '777 ಚಾರ್ಲಿ' ಸಿನಿಮಾ ದೇಶಾದ್ಯಂತ ಸದ್ದು ಮಾಡಿತ್ತು. 150 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದ್ದು ಆ ಸಿನಿಮಾದ ಹೆಚ್ಚುಗಾರಿಕೆ. '777 ಚಾರ್ಲಿ' ಚಿತ್ರದಿಂದ ಸಿಕ್ಕ ಭಾರಿ ಯಶಸ್ಸಿನ ಬಳಿಕ ರಕ್ಷಿತ್​ ಶೆಟ್ಟಿ ಅವರಿಗೆ ಪರಭಾಷೆಯಿಂದ ಆಫರ್​ ಬರಲು ಆರಂಭಿಸಿವೆ. ಈಗ ಅವರು ಕಾಲಿವುಡ್​ನ ಖ್ಯಾತ ನಟ 'ದಳಪತಿ' ವಿಜಯ್ (Thalapathy Vijay)​ ನಟನೆಯ 67ನೇ ಸಿನಿಮಾದಲ್ಲಿ ಬಣ್ಣ ಹಚ್ಚುವ ಸಾಧ್ಯತೆ ದಟ್ಟವಾಗಿದೆ. 'ದಳಪತಿ 67' (Thalapathy 67) ಚಿತ್ರತಂಡ ರಕ್ಷಿತ್​ ಶೆಟ್ಟಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದೆ ಎಂದು ಸುದ್ದಿ ಆಗಿದೆ.

ದಳಪತಿ ವಿಜಯ್​ ನಟನೆಯ 'ವಾರಿಸು' ಸಿನಿಮಾ ಇತ್ತೀಚೆಗಷ್ಟೇ ರಿಲೀಸ್​ ಆಗಿ ಉತ್ತಮ ಕಮಾಯಿ ಮಾಡಿದೆ. ಆ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್​. ಈಗ ವಿಜಯ್​ ಜೊತೆ ನಟಿಸುವ ಅವಕಾಶ ರಕ್ಷಿತ್​ ಶೆಟ್ಟಿಗೂ ಸಿಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. 'ದಳಪತಿ 67' ಸಿನಿಮಾಗೆ ಲೋಕೇಶ್​ ಕನಗರಾಜ್​ ನಿರ್ದೇಶನ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಇದರ ಶೂಟಿಂಗ್​ ಆರಂಭ ಆಗಿದೆ. ರಕ್ಷಿತ್​ ಶೆಟ್ಟಿ ಜೊತೆ ಮಾತುಕತೆ ನಡೆದಿರುವ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಿಬೇಕಿದೆ.

ರಕ್ಷಿತ್​ ಶೆಟ್ಟಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಮಾತ್ರವಲ್ಲದೆ, ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ದಳಪತಿ ವಿಜಯ್​ ನಟನೆಯ ಸಿನಿಮಾದಲ್ಲಿ ಬಣ್ಣ ಹಚ್ಚಲು ಇನ್ನೂ ಒಪ್ಪಿಕೊಂಡಿಲ್ಲ. ಸಹಿ ಮಾಡಿದ ಬಳಿಕವಷ್ಟೇ ಪಕ್ಕಾ ಸುದ್ದಿ ಹೊರಬೀಳಲಿದೆ.

ಲೋಕೇಶ್​ ಕನಗರಾಜ್​ ಅವರು ಸ್ಟಾರ್​ ನಿರ್ದೇಶಕನಾಗಿ ಮಿಂಚುತ್ತಿದ್ದಾರೆ. 'ಕೈದಿ', 'ಮಾಸ್ಟರ್​', 'ವಿಕ್ರಮ್​' ಮುಂತಾದ ಸಿನಿಮಾಗಳ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಕಮಲ್​ ಹಾಸನ್​ ನಟನೆಯ 'ವಿಕ್ರಮ್​' ಚಿತ್ರಕ್ಕೂ ಕಾರ್ತಿ ನಟನೆಯ 'ಕೈದಿ' ಚಿತ್ರಕ್ಕೂ ಲೋಕೇಶ್​ ಅವರು ಕನೆಕ್ಷನ್​ ಇಟ್ಟಿದ್ದರು. ಈಗ 'ದಳಪತಿ 67' ಕೂಡ ಅದೇ ಮಾದರಿಯಲ್ಲಿ ತಯಾರಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಅದರಲ್ಲಿ ರಕ್ಷಿತ್​ ಶೆಟ್ಟಿಗೆ ಯಾವ ಪಾತ್ರ ಸಿಗಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ರಕ್ಷಿತ್​ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ಇನ್ನು, ಅವರದೇ ನಿರ್ದೇಶನದಲ್ಲಿ ಮೂಡಿಬರಲಿರುವ 'ರಿಚರ್ಡ್​ ಆಂಟನಿ' ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.