ಅವ್ಯವಸ್ಥೆ ತಾಣ ನಂದಗುಡಿ ಗ್ರಾ.ಪಂ; ಪೌರಾಡಳಿತ ಸಚಿವ ಕ್ಷೇತ್ರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ | Hosakote |
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿ ಪಂಚಾಯ್ತಿ ಅವ್ಯವಸ್ಥೆಯ ಗೂಡಾಗಿದೆ. ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಕ್ಷೇತ್ರದ ಈ ಪಂಚಾಯತಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ. ಒಂಬತ್ತು ಸದಸ್ಯರಿರೋ ಪಂಚಾಯ್ತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ತಾತ್ಸರ ಮಾಡಿದ್ದಾರೆ. ಹೌದು ನಂದಗುಡಿ ಪಂಚಾಯ್ತಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಹರಿದು ಬಂದರೂ ಪಂಚಾಯ್ತಿ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ. ರಾತ್ರಿಯಾದ್ರೆ ಸಾಕು ಸಾರ್ವಜನಿಕರು ಕಗ್ಗತ್ತಲಲ್ಲೆ ಕಾಲ ಕಳೆಯಬೇಕಿದೆ. ಇದನ್ನು ಕಂಡು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಪಂಚಾಯ್ತಿಗೆ ಬೀದಿ ದೀಪ ಅಳವಡಿಕೆಗೆ ಬಂದ ಅನುದಾನವನ್ನು ಅಧಿಕಾರಿಗಳು ಹಾಗೂ ಪಿಡಿಓ, ಬಿಲ್ ಕಲೆಕ್ಟರ್ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದ್ದು, ಕೂಡಲೇ ಬೀದಿ ದೀಪ, ಚರಂಡಿ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.