ಮೋದಿ ತಾಯಿಗೆ ಅವಮಾನಿಸಿದ ಎಎಪಿಗೆ ಗುಜರಾತಿಗಳು ತಕ್ಕ ಪಾಠ ಕಲಿಸುತ್ತಾರೆ: ಬಿಜೆಪಿ

ಮೋದಿ ತಾಯಿಗೆ ಅವಮಾನಿಸಿದ ಎಎಪಿಗೆ ಗುಜರಾತಿಗಳು ತಕ್ಕ ಪಾಠ ಕಲಿಸುತ್ತಾರೆ: ಬಿಜೆಪಿ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಗುಜರಾತ್‌ನ ಎಎಪಿ ಮುಖ್ಯಸ್ಥ ಗೋಪಾಲ್‌ ಇಟಾಲಿಯ ಅವರು ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ತಕ್ಕ ಪಾಠವನ್ನು ಗುಜರಾತಿಗಳು ಕಲಿಸಲಿದ್ದಾರೆ ಎಂದಿದೆ.

ಗೋಪಾಲ್‌ ಇಟಾಲಿಯ ಅವರು ಮಾತನಾಡುತ್ತಿರುವ ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಮೋದಿ ಅವರ 100 ವರ್ಷದ ತಾಯಿ ಹೀರಾಬೆನ್‌ ಅವರನ್ನು ಅವಮಾನಿಸಿದ್ದಾರೆ ಎಂದು ದೂರಲಾಗಿದೆ.

ನರೇಂದ್ರ ಮೋದಿ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

'ಪ್ರಧಾನಿ ಮೋದಿ ಅವರ ತಾಯಿಯನ್ನು ಅವಮಾನಿಸಿದರೆ ಗುಜರಾತ್‌ನಲ್ಲಿ ರಾಜಕೀಯ ಲಾಭ ಪಡೆಯಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು. ಆ ತಪ್ಪಿಗೆ ಗುಜರಾತ್‌ ಮತ್ತು ಗುಜರಾತಿಗಳು ಮುಂಬರುವ ಚುನಾವಣೆಯಲ್ಲಿ ತಕ್ಕ ಬೆಲೆ ತೆರುವಂತೆ ಮಾಡುತ್ತಾರೆ' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್‌ ಅವರ ಸಲಹೆಯಂತೆ ಇಟಾಲಿಯ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಗುಜರಾತ್‌ನ ಹಲವು ಎಎಪಿ ಮುಖಂಡರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ಸಮಾಜವನ್ನು ಮತ್ತು ದೇವಸ್ಥಾನಕ್ಕೆ ಹೋಗುವ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಸ್ಮೃತಿ ಇರಾನಿ ಆಪಾದಿಸಿದ್ದಾರೆ.

100 ವರ್ಷದ ಮಹಿಳೆಯನ್ನು ಅವಮಾನಿಸುತ್ತಿರುವುದು ಅಕ್ಷಮ್ಯ. ಅಷ್ಟಕ್ಕೂ ಅವರು ಮಾಡಿರುವ ತಪ್ಪೆಂದರೆ, ನಿಮ್ಮ (ಕೇಜ್ರಿವಾಲ್‌ ಅವರನ್ನು ಉದ್ದೇಶಿಸಿ) ರಾಜಕೀಯಕ್ಕೆ ಅಡ್ಡಬರುತ್ತಿರುವ ನರೇಂದ್ರ ಮೋದಿ ಅವರಿಗೆ ಜನ್ಮ ನೀಡಿರುವುದಾಗಿದೆ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ಇಟಾಲಿಯ ಅವರು ಮಹಿಳೆಯರಿಗೆ ದೇವಸ್ಥಾನಕ್ಕೆ ಹೋಗಬಾರದೆಂದು ಸಲಹೆ ನೀಡುತ್ತಿರುವುದು ಇದೆ. ಧಾರ್ಮಿಕ ಸ್ಥಳಗಳು ಮಹಿಳೆಯರನ್ನು ಶೋಷಿಸುವ ತಾಣಗಳಾಗಿವೆ ಎಂದು ಆರೋಪಿಸಿದ್ದಾರೆ.

ಮೋದಿ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಇಟಾಲಿಯ ಅವರನ್ನು ಗುರುವಾರ ದೆಹಲಿ ಪೊಲೀಸರು ಎರಡೂವರೆ ಗಂಟೆಗಳ ಕಾಲ ಬಂಧಿಸಿದ್ದರು.