ಮ್ಯಾರೆ ಕ್ಷೌರ ಪದ್ಧತಿ ಇನ್ನೂ ಜೀವಂತ!

ಶ್ರೀನಿವಾಸಪುರ: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬಹಳ ಹಿಂದೆ ರೂಢಿಯಲ್ಲಿದ್ದ ಮ್ಯಾರೆ ಕ್ಷೌರ ಪದ್ಧತಿ ಇನ್ನೂ ಜೀವಂತವಾಗಿದೆ. ಸವಿತಾ ಸಮಾಜದ ಹಿರಿಯ ತಲೆಮಾರಿನ ಕೆಲವರು ಇಂದಿಗೂ ದವಸ ಧಾನ್ಯ ಪಡೆದು ಕ್ಷೌರ ಮಾಡುತ್ತಿದ್ದಾರೆ.
ಹಣಕ್ಕೆ ಬದಲಾಗಿ ವರ್ಷಕ್ಕೊಮ್ಮೆ ದವಸ ಧಾನ್ಯ ಪಡೆದು ಕ್ಷೌರ ಮಾಡುವ ಪದ್ಧತಿಗೆ ಸ್ಥಳೀಯವಾಗಿ ಮ್ಯಾರ ಅಥವಾ ಮ್ಯಾರೆ ಎಂದು ಕರೆಯಲಾಗುತ್ತದೆ.
ಒಂದು ಹಳ್ಳಿಗೆ ವಾಡಿಕೆಯಂತೆ ಒಬ್ಬ ಕ್ಷೌರಿಕ ಇರುತ್ತಿದ್ದರು. ಅದು ವಂಶಪಾರಂಪರ್ಯ ವೃತ್ತಿಯಾಗಿತ್ತು. ಒಂದು ಕುಟುಂಬದಲ್ಲಿ ಯಜಮಾನ ಮತ್ತು ಅವನ ಇಬ್ಬರು ಗಂಡು ಮಕ್ಕಳಿದ್ದರೆ, ಯಜಮಾನನಿಗೆ ಮಾತ್ರ ಮ್ಯಾರೆ ಕೊಡಬೇಕಾಗಿತ್ತು. ಇಬ್ಬರು ಮಕ್ಕಳ ಸೇವೆ ಉಚಿತ.
ಚಾಲ್ತಿಯಲ್ಲಿದ್ದ ನಿಯಮದಂತೆ ಒಂದು ತಲೆಗೆ ಮೂರು ಕೊಳಗ ರಾಗಿ ನೀಡಲಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ಬೆಳೆದ ತರಕಾರಿ, ಮೆಣಸಿನಕಾಯಿ, ಹುಣಸೆ ಕಾಯಿ, ಅವರೆ ಕಾಳು ಇತ್ಯಾದಿ ನೀಡಲಾಗುತ್ತಿತ್ತು. ಹಬ್ಬದ ದಿನಗಳಲ್ಲಿ ಪ್ರತಿ ಮನೆಯವರು ಪ್ರೀತಿಯಿಂದ ಊಟ ಬುಟ್ಟಿಗಿಟ್ಟು ಕಳುಹಿಸುತ್ತಿದ್ದರು. ಮುಖ ಹಾಗೂ ತಲೆ ಕ್ಷೌರ ಮಾಡುವುದರ ಜತೆಗೆ ಮದುವೆಯಲ್ಲಿ ಗಂಡಿನ ಉಗುರು ತೆಗೆಯುವಿಕೆ, ಸ್ವರ ಪೆಟ್ಟಿಗೆ ನುಡಿಸಬೇಕಾಗಿತ್ತು.
ಸುಗ್ಗಿ ಕಾಲದಲ್ಲಿ 5 ಕಟ್ಟು ರಾಗಿ ಅರಿ, 5 ಕಟ್ಟು ಭತ್ತದ ಅರಿ ಕೊಡುತ್ತಿದ್ದರು. ಅವುಗಳನ್ನು ಹೊಲದಲ್ಲಿಯೇ ಬಿಡುತ್ತಿದ್ದರು. ವಾಡಿಕೆ ಕೆಸದವರು ಹೋಗಿ ಸಂಗ್ರಹಿಸಿ ತಂದು ಕಣ ಸೇರಿಸಬೇಕಾಗಿತ್ತು. ಕಾಳು ಒಕ್ಕಿ ಕೊಂಡೊಯ್ಯುತ್ತಿದ್ದರು.
ಯಜಮಾನನ ಮಗನಿಗೆ ಮದುವೆಯಾದರೆ, ಮಗನಿಗೆ ಮಾಡುವ ಸೇವೆಗೆ ಮಾತ್ರ ಮ್ಯಾರೆ ಕೊಡಬೇಕಾಗಿತ್ತು. ಯಜಮಾನನ ಸೇವೆ ಉಚಿತ. ಎರಡನೇ ಮಗನಿಗೆ ಮದುವೆ ಮಾಡಿದ ಮೇಲೆ ಎರಡು ಮೇರೆ ಸಿಗುತ್ತಿತ್ತು. ಆದ್ದರಿಂದ ಯಜಮಾನನ ಮಕ್ಕಳಿಗೆ ಬೇಗ ಮದುವೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ, ಅವರ ಮಕ್ಕಳಿಗೆ ಉಚಿತ ಸೇವೆ ಮಾಡಬೇಕಾಗಿತ್ತು. ಕೆಲವು ಸಂದರ್ಭಗಳಲ್ಲಿ ಮನೆಗೆ ಬರುವ ನೆಂಟರಿಷ್ಟರ ಸೇವೆಯನ್ನೂ ಮಾಡಬೇಕಾಗಿತ್ತು.
ಕಾಲಾಂತರದಲ್ಲಿ ಚಾಲ್ತಿಯಲಿದ್ದ ಪಾರಂಪರಿಕ ಪದ್ಧತಿಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬುದರ ಅರಿವಾಗಿ, ಊರು ಚಾಕರಿಗೆ ಬೆನ್ನುತೋರಿಸಿ, ಸಮೀಪದ ಪಟ್ಟಣಗಳಲ್ಲಿ ಸೆಲೂನ್ ತೆರೆದು ಹಣಕ್ಕಾಗಿ ಕ್ಷೌರ ಮಾಡತೊಡಗಿದರು. ಅದರಲ್ಲೂ ಸಮುದಾಯದ ಯುವಕರು ನಗರ, ಪಟ್ಟಣ ಸೇರಿದರು.
ಪಾರಂಪರಿಕ ಕ್ಷೌರ ಪದ್ಧತಿ ನೇಪಥ್ಯಕ್ಕೆ ಸರಿಯಿತು ಎಂದು ಭಾವಿಸಲಾಗಿತ್ತು. ಆದರೆ, ಸಮುದಾಯದ ಹಿರಿಯ ತಲೆಮಾರಿನ ಕೆಲವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ತಾಲ್ಲೂಕಿನ ಕೊಡಿಚೆರುವು ಗ್ರಾಮದ ಗೋಪಾಲಪ್ಪ, ಕೊಡಿಚೆರುವು ಹಾಗೂ ಅಲ್ಲಿಗೆ ಕೂಗಳತೆ ದೂರದಲ್ಲಿರುವ ಗುಂಡಮನತ್ತ ಗ್ರಾಮದಲ್ಲಿ ಹಿಂದಿನಂತೆಯೇ ಕ್ಷೌರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಮಕ್ಕಳು ಮಾತ್ರ ಪಟ್ಟಣದ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
'ನಮ್ಮ ಹಿರಿಯರಿಂದ ಬಂದಿರುವ ಮ್ಯಾರೆ ಪದ್ಧತಿ ಬಿಡದೆ ನಡೆಸಿಕೊಂಡು ಹೋಗುತ್ತಿದ್ದೇನೆ. ಕೆಲವರು ಕಾಳಿನ ಬದಲು ಅಷ್ಟಿಷ್ಟು ಕಾಸು ಕೊಡುತ್ತಾರೆ. ಕೈ ಆಡುವರೆಗೆ ಮಾಡುತ್ತೇನೆ. ನಮ್ಮ ಹುಡುಗರು ಮುಂದುವರಿಸುವ ನಂಬಿಕೆ ಇಲ್ಲ' ಎಂದು ಗೋಪಾಲಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.