ನವೆಂಬರ್ 20 ರಂದು ಬಳ್ಳಾರಿಯಲ್ಲಿ ಎಸ್.ಟಿ ಮೋರ್ಚಾ ಸಮಾವೇಶ: ಸಿಎಂ ಬೊಮ್ಮಾಯಿ

ನವೆಂಬರ್ 20 ರಂದು ಬಳ್ಳಾರಿಯಲ್ಲಿ ಎಸ್.ಟಿ ಮೋರ್ಚಾ ಸಮಾವೇಶ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಳ್ಳಾರಿಯಲ್ಲಿ ನವೆಂಬರ್ 20 ರಂದು ಎಸ್.ಟಿ ಮೋರ್ಚಾ ಸಮಾವೇಶ ಹಾಗೂ ನ. 30 ರಂದು ಮೈಸೂರಿನಲ್ಲಿ ಎಸ್.ಸಿ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಜನಸಂಕಲ್ಪ ಯಾತ್ರೆ ಪುನಃ ಪ್ರಾರಂಭವಾಗಲಿದೆ.

ಉಡುಪಿ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೂರು ದಿನಗಳು ಸತತವಾಗಿ ಕಾರ್ಯಕ್ರಮಗಳಿವೆ. ಡಿಸೆಂಬರ್ ವರೆಗೆ ಜನಸಂಕಲ್ಪ ಯಾತ್ರೆ ಮುಂದುವರೆಯಲಿದೆ. ಅಭೂತಪೂರ್ವ ಬೆಂಬಲ ಎಲ್ಲೆಡೆ ದೊರೆಯುತ್ತಿದೆ. ಈ ಬಾರಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದು, ಇದು ನಮ್ಮ ಮುಂದಿನ ವಿಜಯಕ್ಕೆ ಪುಷ್ಟಿ ನೀಡುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ನ. 11 ರಂದು ರಾಜ್ಯಕ್ಕೆ ಆಗಮಿಸಿದ್ದು ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಂದೇ ಭಾರತ್ – ಚೆನ್ನೈ – ಮೈಸೂರು- ಬೆಂಗಳೂರು ರೈಲನ್ನು ಉದ್ಘಾಟಿಸಲಿದ್ದಾರೆ. ಇದು ಬಹಳ ದಿನಗಳ ನಮ್ಮ ಬೇಡಿಕೆಯಾದ ಹೈಸ್ಪೀಡ್ ರೈಲನ್ನು ಪ್ರಧಾನಿಗಳು ಈಡೇರಿಸುತ್ತಿದ್ದಾರೆ. ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಇದರ ಅವಶ್ಯಕತೆ ಕೂಡ ಇತ್ತು. ಬೆಂಗಳೂರಿಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದು, 25 ಲಕ್ಷ ಜನರನ್ನು ನಿಭಾಯಿಸುವ ಸಾಮರ್ಥ್ಯವುಳ್ಳ, ನೂರು ಕೌಂಟರ್ ಗಳುಳ್ಳ ಅಂತಾರಾಷ್ಟ್ರೀಯ ಟರ್ಮಿನಲ್ ಉದ್ಘಾಟನೆಯಾಗುತ್ತಿದೆ. ಎರಡೂ ಟರ್ಮಿನಲ್ ಕೂಡಿದರೆ, ದೆಹಲಿಯ ನಂತರ ದೇಶದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ. ಕರ್ನಾಟಕ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರವಾಸೋದ್ಯಮ, ಕೈಗಾರಿಕೆ, ಐ.ಟಿ, ಬಿಟಿ, ಆರ್.ಅಂಡ್ ಡಿ ವಲಯಗಳಿಗೂ ದೊಡ್ಡ ಅನುಕೂಲವಾಗಲಿದೆ ಎಂದರು.

ನಂತರ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣವಾಗುತ್ತಿದೆ. ಕೆಂಪೇಗೌಡರು ವಿಕಾಸಪುರುಷರು. ಹೀಗಾಗಿ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಇಡೀ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿಗಳಿಂದ ಉದ್ಘಾಟನೆಯಾಗುತ್ತಿರುವುದು ಅತ್ಯಂತ ಯೋಗ್ಯವಾಗಿದೆ. ನಂತರ ಸಾರ್ವಜನಿಕ ಕಾರ್ಯಕ್ರಮವಿರಲಿದೆ ಎಂದರು.

ಸೋಲಾರ್ ಪರವಾನಗಿ ಬಗ್ಗೆ ತನಿಖೆ: ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿಯವರಿಗೆ ಸೋಲಾರ್ ನಿಂದ ವಿದ್ಯುತ್ ಉತ್ಪಾದನೆಗೆ ನೀಡಿರುವ ಪರವಾನಗಿಯಲ್ಲಿ ಆಗಿರುವ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಕೇವಲ 7 ಸೆಕೆಂಡಿನಲ್ಲಿ ಆನ್ ಲೈನ್ ಮೂಲಕ ನೀಡಿರುವ ಪಟ್ಟಿಯನ್ನು ನೀಡಿದರೆ ಯಾವ ರೀತಿ ಆಗಿದೆ ಎಂದು ತಿಳಿಯುತ್ತದೆ. ಅದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದರು.

ಎಲ್ಲಾ ಆಯಾಮಗಳಲ್ಲಿ ತನಿಖೆ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ನಿಗೂಢ ಸಾವಿಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಮಾತನಾಡಿದ್ದು, ಅವರ ಪ್ರಕಾರ ಏನು ನಡೆದಿದೆ ಎಂದು ಮಾಹಿತಿಯನ್ನು ನೀಡಿ, ಸೂಕ್ತ ನಿರ್ದೇಶನವನ್ನು ಐ.ಜಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದೇನೆ. ಮರಣೋತ್ತರ ಪರೀಕ್ಷೆಯಲ್ಲಿ ಬಹುತೇಕ ಸತ್ಯಾಂಶ ಹೊರಬರುತ್ತದೆ ನಂತರ ತನಿಖೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಲಾಗುತ್ತದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದರು.