ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳ: ರೈತರ ಜಾತ್ರೆಯಂತೆ ಕಂಡುಬಂದ ಮೇಳ

ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳ: ರೈತರ ಜಾತ್ರೆಯಂತೆ ಕಂಡುಬಂದ ಮೇಳ

ಬೆಂಗಳೂರು: ಬೆಂಗಳೂರಿನ ಜಿಕೆವಿಕೆಯಲ್ಲಿ ಮಳೆಯ ನಡುವೆಯೂ ಆರಂಭವಾದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೇಳವು ರೈತರ ಜಾತ್ರೆಯಂತೆ ಕಂಡುಬಂತು. ಕೃಷಿಕರ ಹುಮ್ಮಸ್ಸು ಹೆಚ್ಚಿಸಿತ್ತು. ಮೇಳದಲ್ಲಿ ಸಾಧಕ ರೈತರ ಪರಿಶ್ರಮ, ಕೃಷಿಯಲ್ಲಿ ಲಾಭ ಕಂಡುಕೊಂಡ ಬಗೆ ಅನಾವರಣಗೊಂಡಿತ್ತು.

ಖುಷ್ಕಿ ಬೇಸಾಯದ ಬೆಳೆ, ತೋಟಗಾರಿಕೆ ಮಳಿಗೆ, ಸಮಗ್ರ ಬೇಸಾಯ ಪದ್ಧತಿ ವಿಧಾನ, ಜಲಾನಯನ ನಿರ್ವಹಣೆ, ಹನಿ ನೀರಾವರಿ ಪದ್ಧತಿ, ಚಾವಣಿ ಹಾಗೂ ಮಳೆ ನೀರು ಸಂಗ್ರಹ ವಿಧಾನ, ಮಣ್ಣು ರಹಿತ ಕೃಷಿಯ ಆವಿಷ್ಕಾರ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ.

ಮೇಳದಲ್ಲಿ ನಿರ್ಮಿಸಿದ್ದ 697 ಮಳಿಗೆ ಪೈಕಿ ಮೊದಲ ದಿವಸ 500ರಷ್ಟು ಮಳಿಗೆಗಳಲ್ಲಿ ಭರ್ತಿಯಾಗಿದ್ದವು. ಪ್ರತಿ ಮಳಿಗೆಯೂ ವಿಭಿನ್ನ ರೀತಿ ಅನುಭವ ಕಟ್ಟಿಕೊಟ್ಟವು. ದೂರದ ಊರುಗಳಿಂದ ಆಗಮಿಸಿದ್ದ ರೈತರು ಪ್ರತಿ ಮಳಿಗೆಯತ್ತಲೂ ಕಣ್ಣು ಹಾಯಿಸಿ ಮಾಹಿತಿ ಪಡೆದುಕೊಂಡರು. ಯಂತ್ರೋಪಕರಣ ಮಳಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ರೈತರ ನೆರವಿಗೆ ವಿವಿಧ ಕಂಪನಿಗಳು ನಿರ್ಮಿಸಿರುವ ಉಪಕರಣಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಸ್ಥಳದಲ್ಲಿಯೇ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ಹಾಗೂ ಜಾನಪದ ಕಲಾವಿದರ ಹಾಡುಗಳು ಮನ ಸೆಳೆಯಿತು.