ಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೇ ಬರುತ್ತಿರಲಿಲ್ಲ; ಎಸ್.ಎಲ್. ಭೈರಪ್ಪ

ಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೇ ಬರುತ್ತಿರಲಿಲ್ಲ; ಎಸ್.ಎಲ್. ಭೈರಪ್ಪ

ಮೈಸೂರು, ಜನವರಿ. 26: ಕನ್ನಡದ ಹೆಸರಾಂತ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಗೌರವ ಲಭಿಸಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಹೇಳಿದ್ದಾರೆ.

ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದಕ್ಕೆ ಮೋದಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ಅವರು, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಕಾರಣ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ.

ಇಲ್ಲದಿದ್ದರೇ ನನಗೆ ಈ ಪ್ರಶಸ್ತಿ ದೊರೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿತಿ ಎಸ್.ಎಲ್. ಭೈರಪ್ಪ, ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ ಎಂದಿರುವ ಅವರು, ಸಾಹಿತ್ಯಕ್ಕೆ ಈ ಅತ್ಯುನ್ನತ ಗೌರವ ಸಿಕ್ಕಿರೋದು ಸಂತೋಷ ತಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದ ಹೇಳಿರುವ ಅವರು, ಪ್ರಧಾನ ಮಂತ್ರಿಯನ್ನು ಹಾಡಿ ಹೊಗಳಿದ್ದಾರೆ. ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಅವರನ್ನು ಹೊಗಳುತ್ತಿಲ್ಲ. ಮೋದಿಯಂತಹ ಪ್ರಧಾನ ಮಂತ್ರಿಯನ್ನು ನಾವು ಹಿಂದೆಂದೂ ನೋಡಿಲ್ಲ. 2024 ಮತ್ತು2029 ರ ವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ. ನಂತರ ಅವರು ನಿವೃತ್ತರಾಗಲಿ. ಅವರದ್ದೇ ಮನೋಭಾವವಿರುವ ಮತ್ತೊಬ್ಬರನ್ನು ತಯಾರು ಮಾಡಬೇಕು. ಈ ದೇಶಕ್ಕೆ ಅವರ ಸೇವೆ ಇನ್ನಷ್ಟು ಬೇಕಿದೆ ಎಂದು ಎಸ್‌ಎಲ್ ಭೈರಪ್ಪ ಹೇಳಿದ್ದಾರೆ.

"ಒಬ್ಬ ಲೇಖಕ ಸತ್ತೇ ಸಾಯುತ್ತಾನೆ. ಆದರೆ, ಅವರು ಬರೆದ ಪುಸ್ತಕ ಜೀವಂತವಾಗಿರುತ್ತವೆ. ಪದ್ಮಭೂಷಣ ‍ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಸದಾ ಜೀವಂತವಾಗಿರುತ್ತಾನೆ. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ನನ್ನ ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ" ಎಂದು ಹೇಳಿದ್ದಾರೆ.

ಈ ಬಾರಿ ರಾಜ್ಯದ ಎಂಟು ಮಂದಿಗೆ ಪದ್ಮ ಪ್ರಶಸ್ತಿ ಗೌರವ ಲಭಿಸಿದೆ. ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಕಲೆ ಮತ್ತು ಸಾಹಿತ್ಯಕ್ಕೆ ಎಸ್‍.ಎಲ್. ಭೈರಪ್ಪ ಅವರಿಗೆ ಪದ್ಮ ಭೂಷಣ, ಸುಧಾಮೂರ್ತಿ ಅವರ ಸಾಮಾಜಿಕ ಕಾರ್ಯಗಳಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಕೊಡಗಿನ ಜಾನಪದ ನರ್ತಕಿ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದೂದೇಕುಲ, ಕಲೆ ವಿಭಾಗದಲ್ಲಿ ತಮಟೆಯ ತಂದೆ ಎಂದು ಪ್ರಖ್ಯಾತರಾದ ನಾಡೋಜ ಪಿಂಡಿಪಾಪನಹಳ್ಳಿ ಮುನಿ ವೆಂಕಟಪ್ಪ ಮತ್ತು ಐ ಶಾ ರಶೀದ್ ಅಹಮದ್ ಕ್ವಾದ್ರಿ, ಪುರಾತತ್ವ ಶಾಸ್ತ್ರ ವಿಭಾಗದಲ್ಲಿ ಸುಬ್ಬರಾಮನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.