ಕರ್ನಾಟಕದ ಸರ್ಕಾರಿ ಶಾಲೆಗಳಿಗೆ 'ರಾಜಕಳೆ' ನೀಡಲು 100 ರೂ. ಕೊಡಿ ಪ್ಲೀಸ್!
ಬೆಂಗಳೂರು;, ಅಕ್ಟೋಬರ್ 21: ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಹಾವಳಿ ಹೊರತಾಗಿಯೂ ಸರ್ಕಾರಿ ಶಾಲೆಗಳ ಕಡೆಗೆ ಮಕ್ಕಳು ಮುಖ ಮಾಡುವಂತೆ ಪರಿವರ್ತಿಸಬೇಕಿದೆ. ಸರ್ಕಾರಿ ಶಾಲೆಗಳಿಗೆ ರಾಜಕಳೆ ನೀಡಬೇಕಾದರೆ ಪೋಷಕರು ಸ್ವಲ್ಪ ದೊಡ್ಡ ಮನಸ್ಸು ಮಾಡಬೇಕು.
ನಿಮ್ಮ ಮಕ್ಕಳು ಓದುವ ಸರ್ಕಾರಿ ಶಾಲೆಗಳಲ್ಲೂ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ನೀವು ಸ್ವಲ್ಪ ಉದಾರಿಗಳಾಗಬೇಕು.
ನಿಮ್ಮ ಮಕ್ಕಳು ಓದುವ ಸರ್ಕಾರಿ ಶಾಲೆಗಳಿಗೆ ನೀವೇಕೆ ಕಾಸು ಕೊಡಬೇಕು?, ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಹಣ ಬರುವುದಿಲ್ಲವೇ?, ಬಡ ಕುಟುಂಬದ ನಾವು ಪ್ರತಿ ತಿಂಗಳು 100 ರೂಪಾಯಿ ಕೊಡುವುದು ಹೇಗೆ ಸಾಧ್ಯ?, ಹೀಗಾದರೆ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೇ ಸೇರಿಸುತ್ತೀವಿ ಎನ್ನುವ ಪೋಷಕರು ಸರ್ಕಾರದ ನಿರ್ಧಾರದ ಬಗ್ಗೆ ಒಮ್ಮೆ ಗಮನವಿಟ್ಟು ಓದಬೇಕಿದೆ. ಸರ್ಕಾರಿ ಶಾಲೆಗಳಲ್ಲೇ ನಿಮ್ಮ ಮಕ್ಕಳು ಗುಣಾತ್ಮಕ ಶಿಕ್ಷಣವನ್ನು ಪಡೆದುಕೊಳ್ಳುವುದರ ಕುರಿತು ತಿಳಿದುಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶಾಲಾ ಆಡಳಿತದಲ್ಲಿ ಸಮುದಾಯದ ಸಕ್ರಿಯ ಪಾತ್ರವನ್ನು ಖಚಿತಪಡಿಸಲು ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಬಗ್ಗೆ ಸರ್ಕಾರದ ಆದೇಶದಲ್ಲಿಯೇ ವಿಸ್ತೃತವಾಗಿ ವಿವರಿಸಲಾಗಿದೆ. ಈ ಮಾರ್ಗದರ್ಶನಗಳನ್ನು ಕಾಲಕಾಲಕ್ಕೆ ಬದಲಾಯಿಸಲಾಗುತ್ತದೆ. ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಸಮುದಾಯಗಳ ಪಾಲ್ಗೊಳ್ಳುವಿಕೆಯು ತೀರಾ ಅನಿವಾರ್ಯವಾಗಿದೆ.
ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರವೂ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಇದರ ಜೊತೆಗೆ ಶಾಲೆಗಳ ಸ್ಥಳೀಯ ಅವಶ್ಯಕತೆಯನ್ನು ಪೂರೈಸಲು ಹೆಚ್ಚಿನ ಹಣಕಾಸಿನ ನೆರವು ಅಗತ್ಯವಾಗಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕೆಲವೊಮ್ಮೆ ಶಿಕ್ಷಕರ ಕೊರತೆ ಸೃಷ್ಟಿಯಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣವೇ ಇಲ್ಲದಂತೆ ಆಗುತ್ತದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಇದರಿಂದ ಅಡ್ಡಿ ಉಂಟಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್ ಡಿಎಂಸಿ ಸಮಿತಿಯು ಅತಿಥಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಪಾಠ-ಪ್ರವಚನ ಆಗುವಂತೆ ನೋಡಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಅನುದಾನ ಇಲ್ಲದೇ ಕೊರತೆಯಾದಲ್ಲಿ ಶಾಲಾಭಿವೃದ್ಧಿ ಸಮಿತಿಯು ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಸಣ್ಣ ಪ್ರಮಾಣದ ದುರಸ್ತಿ, ಶಾಲಾ ಶುಚಿತ್ವ, ಶಾಲಾ ಶೈಕ್ಷಣಿಕ ಚಟುವಟಿಕೆಗಳು ಸೇರಿದಂತೆ ಇತ್ಯಾದಿ ವೆಚ್ಚಗಳಿಗೆ ಸಹಕಾರಿ ಆಗಲೆಂದು ಶಾಲಾ ಶೈಕ್ಷಣಿಕ ಅಭಿವೃದ್ಧಿಗಾಗಿ 'ನಮ್ಮ ಶಾಲೆ ನನ್ನ ಕೊಡುಗೆ' ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಸಾರ್ವಜನಿಕರಿಂದ ಹಾಗೂ ವಿದ್ಯಾರ್ಥಿಗಳ ಪೋಷಕರಿಂದ ಕೊಡುಗೆ, ದಾನದ ರೂಪದಲ್ಲಿ ಆರ್ಥಿಕ ಸಹಾಯ ಪಡೆಯಲು ಅನುಮತಿ ನೀಡಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಪೋಷಕರಲ್ಲೂ ಅದು ನಮ್ಮ ಶಾಲೆ ಎಂಬ ಭಾವನೆ ಮೂಡಬೇಕು ಎಂಬ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದಲೇ ವಿದ್ಯಾರ್ಥಿಗಳ ಪೋಷಕರಿಂದ ಪಡೆಯಬಹುದಾದ ದಾನ, ಸ್ವ-ಇಚ್ಛೆಯಿಂದ ನೀಡುವ ಕೊಡುಗೆ ಹಾಗೂ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು 100 ರೂಪಾಯಿ ಹಣವನ್ನು ಸಂಗ್ರಹಿಸಿ ಅದನ್ನು ನಿಗದಿತ ಎಸ್ ಡಿಎಂಸಿ ಖಾತೆಗೆ ಜಮೆ ಮಾಡಲಾಗುತ್ತದೆ. ಎಸ್ ಡಿಎಂಸಿ ನಿಯಮಗಳ ಪ್ರಕಾರ, ನಿಗದಿತ ರಶೀದಿ ನೀಡುವುದರ ಜೊತೆಗೆ ಪ್ರತ್ಯೇಕ ಲೆಕ್ಕಪತ್ರಗಳನ್ನು ಇಡಲಾಗುತ್ತದೆ.
ಸರ್ಕಾರಿ ಶಾಲೆಯಲ್ಲಿ ಪೋಷಕರು ನೀಡುವ ದೇಣಿಗೆ ರೂಪದ ಹಣವನ್ನು ವಿವಿಧ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ. ಈ ಪೈಕಿ ಪ್ರಾಥಮಿಕ ಆದ್ಯತೆ ಮತ್ತು ದ್ವಿತೀಯ ದರ್ಜೆ ಆದ್ಯತೆ ಎಂದು ವಿಭಾಗಿಸಲಾಗಿದೆ. ಮೊದಲ ಆದ್ಯತೆಯ ಪ್ರಕಾರ ಹಣವನ್ನು ಈ ಕಾರ್ಯಗಳಿಗಾಗಿ ಉಪಯೋಗಿಸಲಾಗುತ್ತದೆ. ಅದನ್ನು ಮುಂದೆ ಪಟ್ಟಿ ಮಾಡಲಾಗಿದೆ.
* ಕುಡಿಯುವ ನೀರು
* ಶೌಚಾಲಯ ಮತ್ತು ಶಾಲೆಯ ಶುಚಿತ್ವ
* ಶಾಲೆಯ ವಿದ್ಯುತ್ ಬಿಲ್
* ಶಾಲಾ ಪರಿಕರಗಳ ತುರ್ತು ರಿಪೇರಿ
* ಬಿಸಿಯೂಟ ಸೇವಿಸಲು ಮಕ್ಕಳಿಗೆ ಸಹಕಾರಿಯಾಗುವ ಪೂರಕ ವಸ್ತುಗಳು
* ಇಲಾಖೆಯು ನೀಡುವ ಹೆಚ್ಚುವರಿ ಶಿಕ್ಷಕರ ಹೊರತಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅತಿಥಿ ಶಿಕ್ಷಕರನ್ನು ಬಳಸಿಕೊಂಡಲ್ಲಿ, ಅವರಿಗೆ ನೀಡುವ ಗೌರವ ಧನ
* ಗಣಕಯಂತ್ರಗಳ ರಿಪೇರಿ
* ಅಗತ್ಯ ಬೋಧನೋಪಕರಣ ಸಂಗ್ರಹಣೆ
* ಮಕ್ಕಳ ಉಪಯೋಗಕ್ಕಾಗಿ ಬೆಂಚ್ ಅಥವಾ ಡೆಸ್ಕ್
* ಶಾಲಾ ಆಟದ ಮೈದಾನ ಸಿದ್ಧತೆ
* ಶಾಲೆಯ ಇ-ಕಲಿಕಾ ಕೇಂದ್ರ ಸ್ಥಾಪನೆ
* ಗ್ರಂಥಾಲಯ / ವಾಚನಾಲಯ ಬಲವರ್ಧನೆ
* ಸ್ಕೌಟ್-ಗೈಡ್ಸ್, ಎನ್‌ಎಸ್‌ಎಸ್, ಎನ್ ಸಿಸಿ ಮಕ್ಕಳಿಗೆ ಅಗತ್ಯ ಸಮವಸ್ತ್ರ ಮತ್ತು ಸಾಮಗ್ರಿಗಳು
* ಶಾಲಾವನ ಬಲವರ್ಧನೆ
* ಅವಶ್ಯಕವಾಗಿರುವ ಇತರೆ ವೆಚ್ಚಗಳು