665 ಲೀಟರ್ ಸ್ಪಿರಿಟ್ ವಶಕ್ಕೆ ಪಡೆದ ಅಬಕಾರಿ ಪೊಲೀಸರು
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಟ್ಟು 665 ಲೀಟರ್ ಸ್ಪಿರಿಟ್ನಲ್ಲಿ ಅಬಕಾರಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಬೈಪಾಸ್ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಹಳೇಹುಬ್ಬಳ್ಳಿಯ ಚನ್ನಬಸವ ಸಾಲಿಮಠ ಊರ್ಫ್ ರಾಜು ಚಿಕ್ಕಮಠ, ಬಳ್ಳಾರಿಯ ಶಾಂತಿ ಕಾಲೊನಿಯ ಸುನೀಲ ಶಂಕರ ಹಾಗೂ ಹುಬ್ಬಳ್ಳಿಯ ರಾಮು ಗಾಯಕವಾಡ ಎಂಬುವವರೇ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದರು. ಅಬಕಾರಿ ಪೊಲೀಸ್ ದಾಳಿ ವೇಳೆ ಚನ್ನಬಸಪ ಸಾಲಿಮಠ ಊರ್ಫ್ ರಾಜು ಚಿಕ್ಕಮಠ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ. 20 ಲೀಟರ್ ಸಾಮರ್ಥ್ಯದ 16 ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಒಟ್ಟು 320 ಲೀಟರ್ ಹಾಗೂ 25 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳಲ್ಲಿ 345 ಲೀಟರ್ ಸ್ಪಿರಿಟ್ನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಒಟ್ಟು 69 ಸಾವಿರ ಮೌಲ್ಯದ ಸ್ಪಿರಿಟ್ ಇದಾಗಿದ್ದು, ಇದನ್ನು ಬೆಳಗಾವಿ ಕಡೆಗೆ ಸಾಗಿಸಲಾಗುತ್ತಿತ್ತು. ಇದರೊಂದಿಗೆ ಅಂದಾಜು 5 ಲಕ್ಷ ಮೌಲ್ಯದ ಕಾರನ್ನೂ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ, ಅಬಕಾರಿ ಉಪ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ, ಜಾನ್ ವರ್ಗೀಸ್, ಎಸ್.ವಿ.ಕಮ್ಮಾರ, ಎಸ್.ಜಿ.ಮುಜಾವರ, ರವಿಕುಮಾರ ಬಿಳಕಾರ, ಬಲವಂತ ಫಡಕೆ ದಾಳಿ ನಡೆಸಿದ್ದರು.