ಕಲಬುರಗಿ ಬಸ್​ ನಿಲ್ದಾಣದಲ್ಲಿ ನಡೆದ ಯುವಕನ ಕೊಲೆ ಪ್ರಕರಣ: ಆರು ಜನರ ಬಂಧನ

ಕಲಬುರಗಿ ಬಸ್​ ನಿಲ್ದಾಣದಲ್ಲಿ ನಡೆದ ಯುವಕನ ಕೊಲೆ ಪ್ರಕರಣ: ಆರು ಜನರ ಬಂಧನ

ಕಲಬುರಗಿ: ಹಾಡು ಹಗಲಲ್ಲೇ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಯುವಕ ಅಭಿಷೇಕ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ಮುರ್ತುಜಾ ಮೊಹಮ್ಮದ್ ಅಲಿ (25), ಸಾಗರ ಭೈರಾಮಡಗಿ (22), ಆಕಾಶ ಜಾಧವ (22), ಶುಭಂ ದೊಡ್ಡಮನಿ (23), ಅಶೋಕ ಮೂಲಭಾರತಿ (21) ಹಾಗೂ ಕೌಶಿಕ್ ಹಳೆಮನಿ (21) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಮಚ್ಚು, ಎರಡು ಬೈಕ್ ಹಾಗೂ ಒಂದು ಇನ್ನೋವಾ ಕಾರ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.       

ಅಭಿಷೇಕ ತನ್ನ ಗ್ಯಾಂಗ್​​​ನೊಂದಿಗೆ ಒಂದೂವರೆ ವರ್ಷದ ಹಿಂದೆ ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರೀಡ್ಜ್ ಹತ್ತಿರ ಸಾಗರ ಭೈರಾಮಡಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇದೇ ವೈಷಮ್ಯದಿಂದ ಸಾಗರ ಹಾಗೂ ಆತನ ಸಹಚರರು ನವೆಂಬರ್​​ .04 ರಂದು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಅಭಿಷೇಕನನ್ನು ಹಾಡುಹಗಲೇ ಭಯಾನಕವಾಗಿ ಹತ್ಯೆ ಮಾಡಿದ್ದರು. ಹತ್ಯೆಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದವು.

ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈ ಕುರಿತು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.