ಚಿಂಚೋಳಿ: ನನೆಗುದಿಗೆ ಬಿದ್ದ ಸಕ್ಕರೆ ಕಾರ್ಖಾನೆ
ಚಿಂಚೋಳಿ: 2019ರ ಉಪಚುನಾವಣೆ ಯಲ್ಲಿ ಹಲವು ಭರವಸೆಗಳನ್ನು ನೀಡಿದ್ದ ಬಿಜೆಪಿ ವರಿಷ್ಠರು, ತಮ್ಮ ಅಭ್ಯರ್ಥಿ ಗೆದ್ದ ಬಳಿಕ ಕ್ಷೇತ್ರದತ್ತ ಮುಖಮಾಡಿಲ್ಲ. ಕೊಟ್ಟ ಆಶ್ವಾಸನೆಗಳು ಈಡೇರಿಸಿಲ್ಲ ಎಂದು ಕೆಲ ಮುಖಂಡರು ಹಾಗೂ ಜನರು ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ವೇಳೆಯಲ್ಲಿ ಟೀಕಿಸುತ್ತಿದ್ದಾರೆ.
ಹಿಂದುಳಿದ ಕ್ಷೇತ್ರದ ಹಣೆಪಟ್ಟಿ ತೊಡೆದು, ಅಭಿವೃದ್ಧಿಯ ಹೊಳೆ ಹರಿಸುತ್ತೇವೆ ಎಂದಿದ್ದರು. ಬಹುಬೇಡಿಕೆಯ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮತ್ತು ಐನಾಪುರ ಏತ ನೀರಾವರಿ ಯೋಜನೆ ಮಂಜೂರಾತಿ ನನೆಗುದ್ದಿಗೆ ಬಿದ್ದಿವೆ ಎಂಬುದು ಇಲ್ಲಿನವರ ಬೇಸರ.
'ಅವಿನಾಶ ಜಾಧವ ಅವರನ್ನು ಗೆಲ್ಲಿಸಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಒಂದೇ ವರ್ಷದಲ್ಲಿ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡುತ್ತೇನೆ' ಎಂದು ಚುನಾವಣೆ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ಆಶ್ವಾಸನೆ ಕೊಟ್ಟಿದ್ದರು. ಇದಕ್ಕೆ ಜಾಧವ ಅವರು ಸಹ ಧ್ವನಿಗೂಡಿಸಿದ್ದರು. ಆದರೆ, ಇದುರೆಗೂ ಅದು ಈಡೇರಿಲ್ಲ.
ಐನಾಪುರ ಏತ ನೀರಾವರಿ ಯೋಜನೆಗಾಗಿ ಹಲವು ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ನಿರೀಕ್ಷೆಯಂತೆ ಅನುದಾನ ಸಹ ಕ್ಷೇತ್ರಕ್ಕೆ ಹರಿದು ಬಂದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಇದ್ದೂ ಇಲ್ಲದಂತಾಗಿದೆ ಎಂಬುದು ಸ್ಥಳೀಯರ ಆಪಾದನೆಯಾಗಿದೆ.
***
ಬಿಜೆಪಿ ಸರ್ಕಾರ ಎರಡು ಬಾರಿ ನೆರೆ ಹಾವಳಿ, ಕೋವಿಡ್ ಸಾಂಕ್ರಾಮಿಕವನ್ನು ಸರಿಯಾಗಿ ನಿರ್ವಹಿಸಿ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಹ ನೀಡಿದೆ.
-ಸಂತೋಷ ಗಡಂತಿ, ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ
***
ಕೋವಿಡ್ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ. ಮೃತರ ದತ್ತಾಂಶ ಸಮರ್ಪಕವಾಗಿಲ್ಲ. ನೆರೆ ಪರಿಹಾರ ಸಹ ಸರಿಯಾಗಿ ನೀಡದೆ ಜನತೆಯ ನಿರೀಕ್ಷೆ ಹುಸಿಯಾಗಿಸಿದೆ.
- ಅನಿಲಕುಮಾರ ಜಮಾದಾರ, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
***
ರಾಜ್ಯ ಸರ್ಕಾರಕ್ಕೆ ಇನ್ನೂ ಕಾಲಾವಕಾಶವಿದೆ. ಮುಂದಿನ ದಿನಗಳಲ್ಲಿ ನನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನು ಕಾರ್ಯಗತ ಮಾಡಬಹುದು.
-ಶಿವಾನಂದ ಪಾಟೀಲ, ನೀರಾವರಿ ಹೋರಾಟಗಾರ