ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ ಸ್ಥಗಿತಕ್ಕೆ ಕಾರಣ ಏನು?, ಇಲ್ಲಿದೆ ವಿವರ
ಮೈಸೂರು, ಫೆಬ್ರವರಿ, 01: ಮೈಸೂರು-ಬೆಂಗಳೂರಿಗೆ ಹೋಗುವ ಸುಮಾರು ಪ್ರಯಾಣಿಕರು ವಿಮಾನಗಳಲ್ಲಿಯೇ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದರು. ರಸ್ತೆ ಸುಗಮವಾಗಿಲ್ಲದಿದ್ದರಿಂದ ಹೆಚ್ಚಿನ ಪ್ರಯಾಣಿಕರು ವಿಮಾನಗಳಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದರು. ಇದೀಗ ಎಕ್ಸ್‌ಪ್ರೆಸ್ ವೇ ನಿರ್ಮಾಣ ಆಗಿದ್ದು, ಹೆಚ್ಚಿನ ಪ್ರಯಾಣಿಕರು ಈ ಹೆದ್ದಾರಿಯಲ್ಲೇ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣ ಮಾಡಲು ಶುರು ಮಾಡಿದ್ದಾರೆ.
ವಿಮಾನ ಸೇವೆ ಸ್ಥಗಿತಕ್ಕೆ ಕಾರಣ ಏನು?
ನಿರಂತರವಾಗಿ ಪ್ರಯಾಣಿಕರ ಕೊರತೆಯಿಂದಾಗಿ ಮೈಸೂರು-ಬೆಂಗಳೂರು ನಡುವಿನ ವಿಮಾನ ಸೇವೆ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. 2022ರ ಅಕ್ಟೋಬರ್ 31ರಿಂದ ಮೈಸೂರು-ಬೆಂಗಳೂರು ಮಾರ್ಗದ ಎಲ್ಲಾ ಬುಕ್ಕಿಂಗ್‌ಗಲು ಕೂಡ ರದ್ದಾಗಿವೆ. ಮೈಸೂರು-ಬೆಂಗಳೂರು ನಡುವೆ ದಶ ಪಥದ ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರಿಗೆ ಸಂಚಾರ ಮುಕ್ತವಾಗಿದೆ. ಅಲ್ಲದೇ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಎರಡು ತಾಸಿಗೆ ಹವಾನಿಯಂತ್ರಿತ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ. ಈ ಕಾರಣದಿಂದ ದುಬಾರಿ ವೆಚ್ಚ ಭರಿಸಿ ವಿಮಾನಯಾನದಲ್ಲಿ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಈ ಮಾರ್ಗದ ವಿಮಾನ ಸೇವೆಗಳು ರದ್ದಾಗಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
ವಂದೇ ಭಾರತ್ ರೈಲು, ಎಕ್ಸ್‌ಪ್ರೆಸ್ ವೇನ ಪ್ರಭಾವ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಸೇವೆ ಒದಗಿಸುತ್ತಿದ್ದ ಅಲಯನ್ಸ್ ಏರ್ ವಿಮಾನವು ಮೈಸೂರಿಗೆ ಬರುತ್ತಿತ್ತು. ಇದೀಗ ಪ್ರಯಾಣಿಕರ ಕೊರತೆಯಿಂದಾಗಿ ಬೆಂಗಳೂರು-ಮೈಸೂರು ನಡುವಿನ ಸೇವೆಯನ್ನು ಮೊಟಕುಗೊಳಿಸಿ, ನೇರವಾಗಿ ಬೆಂಗಳೂರು-ಕೊಚ್ಚಿ ನಡುವೆ ಮಾತ್ರ ಸೇವೆ ನೀಡಲಾಗುತ್ತಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಮಾಹಿತಿ ನೀಡಿದ್ದಾರೆ.
ವಿಮಾನಗಳ ಕಡೆ ಮುಖ ಮಾಡದ ಪ್ರಯಾಣಿಕರು
ಮೈಸೂರಿನಿಂದ ಮಂಡಕಳ್ಳಿ ಏರ್‌ಪೋರ್ಟ್ ತಲುಪಿ ಅಲ್ಲಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಾಗುತ್ತದೆ. ನಂತರ ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಇಳಿದು ಬೇರೆ ವಾಹನದಲ್ಲಿ ತಮ್ಮ ಸ್ಥಳಕ್ಕೆ ತಲುಪಬೇಕೆಂದರೆ ದುಬಾರಿ ವೆಚ್ಚ ತಗುಲುತ್ತದೆ. ಅಲ್ಲದೆ ಸಮಯವೂ ವ್ಯರ್ಥವಾಗುವುದರಿಂದ ಪ್ರಯಾಣಿಕರು ಮೈಸೂರು-ಬೆಂಗಳೂರು ನಡುವೆ ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ಸದ್ಯ ಮೈಸೂರಿನಿಂದ ಹೈದರಾಬಾದ್, ಚೆನ್ನೈ, ಗೋವಾ ಮತ್ತು ಹುಬ್ಬಳ್ಳಿಗೆ ಮಾತ್ರ ವಿಮಾನ ಸೇವೆ ಇದೆ. ಮೈಸೂರು-ಬೆಳಗಾವಿ ನಗರಗಳ ನಡುವಿನ ವಿಮಾನ ಹಾರಾಟವೂ ಸಹ ಬೇಡಿಕೆ ಇಲ್ಲದ ಕಾರಣಕ್ಕೆ ರದ್ದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮತ್ತು ವಂದೇ ಭಾರತ್ ರೈಲುಗಳ ಆಗಮನದಿಂದ ವಿಮಾನಗಳಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಗಣನೀಯವಾಗಿ ಕುಗ್ಗುತ್ತಾ ಬಂದಿದೆ. ಇದರಿಂದ ಮೈಸೂರು-ಬೆಂಗಳೂರು ಮಾರ್ಗವಾಗಿ ಹಾರಾಡುತ್ತಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.