ತಲೆಕೆಡಿಸಿಕೊಳ್ಳಬೇಡಿ; ಗೆಲ್ಲಿಸುವ ಹೊಣೆ ನಮ್ಮದು: ಅಮಿತ್‌ ಶಾ

ತಲೆಕೆಡಿಸಿಕೊಳ್ಳಬೇಡಿ; ಗೆಲ್ಲಿಸುವ ಹೊಣೆ ನಮ್ಮದು: ಅಮಿತ್‌ ಶಾ

ಬೆಂಗಳೂರು: “ಚುನಾವಣೆ ಗೆಲ್ಲಲು ಬೇಕಾದ ಪ್ರಯೋಗವನ್ನು ನಾವು ಮಾಡುತ್ತೇವೆ. ಪ್ರತಿ ಯೊಬ್ಬರೂ ವಿಶ್ವಾಸ, ಒಗ್ಗಟ್ಟಿನಿಂದ ಕೆಲಸ ಮಾಡಿ.’ ಇದು ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ “ಗ್ಯಾರಂಟಿ’.

ರಾಜ್ಯ ಪ್ರವಾಸದಲ್ಲಿದ್ದ ಶಾ ರವಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಮಾತನಾಡಿ, “ನಾನು ರಾಜ್ಯದಲ್ಲಿ ಈಗಾ ಗಲೇ ಹಲವು ಸುತ್ತು ಪ್ರವಾಸ ನಡೆಸಿದ್ದೇನೆ. ಇಲ್ಲಿನ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಕೂಲಂಕಷ ಮಾಹಿತಿ ನನ್ನ ಬಳಿ ಇದೆ. ಇಂದೇ ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ, ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದು ಧೈರ್ಯ ತುಂಬಿದ್ದಾರೆ.

“ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮೊದಲು ಕ್ಷೇತ್ರವಾರು ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ. ರಾಜ್ಯದ ಜನರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸ ವಿಟ್ಟಿದ್ದು, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದಿದ್ದಾರೆ.

ಬಂಡಾಯಕ್ಕೆ ಅವಕಾಶ ಬೇಡ
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾವು ಸ್ಪಷ್ಟತೆ ಹೊಂದಿದ್ದೇವೆ. ಮಾ. 31ರಂದು ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಿ. ಸ್ಥಳೀಯ ಸಂಸದರು, ಕೋರ್‌ ಕಮಿಟಿ ಸದಸ್ಯರು ಹಾಗೂ ಒಬ್ಬರು ಪದಾಧಿಕಾರಿಯನ್ನು ಒಳಗೊಂಡ ತಂಡ ಪ್ರತೀ ಕ್ಷೇತ್ರದ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ರಾಜ್ಯ ಕಚೇರಿಗೆ ವರದಿ ಕಳುಹಿಸಲಿ. ಆ ವರದಿ ಆಧರಿಸಿ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸುತ್ತೇವೆ. ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ಬಳಿಕವೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಳೇ ಮೈಸೂರಲ್ಲಿ 30ರ ಗುರಿ
ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರ ಗೆಲ್ಲುವ ತಮ್ಮ ಕನಸನ್ನು ಶಾ ಮತ್ತೆ ವ್ಯಕ್ತ ಪಡಿಸಿದ್ದು, ಕನಿಷ್ಠ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದುವಂತೆ ಸೂಚಿಸಿ ದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಗಣ ನೀಯ ಸಾಧನೆ ಮಾಡುತ್ತಾ ಹೋದಂತೆ ಯಾರದ್ದೂ ಹಂಗಿಲ್ಲದೇ ಅಧಿ ಕಾರ ಹಿಡಿಯುವುದಕ್ಕೆ ಅವಕಾಶ ಸಿಗುತ್ತದೆ. ವಿಪಕ್ಷ ನಾಯಕರ ಬಗ್ಗೆ ಅನುಕಂಪ ಪ್ರದರ್ಶನ ಮಾಡು ವು ದನ್ನು ನಿಲ್ಲಿಸಿ ಎಂದು ಕೆಲವು ನಾಯಕರ ಅಡೆjಸ್ಟ್‌ ಮೆಂಟ್‌ ರಾಜ ಕಾರಣದ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿ ದ್ದಾ ರೆಂದು ತಿಳಿದು ಬಂದಿದೆ.