ಶಾಲೆಗಳಲ್ಲಿ ಬ್ಯಾಗ್‌ ರಹಿತ "ಸಂಭ್ರಮ ಶನಿವಾರ' ಆಚರಣೆ

ಶಾಲೆಗಳಲ್ಲಿ ಬ್ಯಾಗ್‌ ರಹಿತ "ಸಂಭ್ರಮ ಶನಿವಾರ' ಆಚರಣೆ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‌ ರಹಿತ ದಿನ (ಸಂಭ್ರಮ ಶನಿವಾರ) ಆಚರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

“ಸಂಭ್ರಮ ಶನಿವಾರ’ ಆಚರಿಸುವ ಸಂಬಂಧ ವಿದ್ಯಾರ್ಥಿ ಚಟುವಟಿಕೆ ಪುಸ್ತಕಗಳು ಹಾಗೂ ಶಿಕ್ಷಕರ ಕೈಪಿಡಿಗಳನ್ನು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಈ ಸಾಮಗ್ರಿಗಳನ್ನು ಬಳಸಿಕೊಳ್ಳುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಬ್ಯಾಗ್‌ ರಹಿತ ದಿನದಂದು ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳಿಗೆ ವಿವಿಧ 10 ವಿಷಯಗಳಲ್ಲಿ ಸ್ವಯಂ ವಿವರಣಾತ್ಮಕ ಚಿತ್ರ ಸಹಿತ ಚಟುವಟಿಕೆಗಳ ಪುಸ್ತಕಗಳನ್ನು ಹಾಗೂ ಅವುಗಳನ್ನು ತರಗತಿಗಳಲ್ಲಿ ನಿರ್ವಹಿಸಲು ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಗೊಳಿಸಲಾಗಿದೆ.

ಈಗಾಗಲೇ “ಕಲಿಕಾ ಚೇತರಿಕೆ’ ಯೋಜನೆ ಅಡಿ ವಿದ್ಯಾರ್ಥಿಗಳಲ್ಲಿ ಅನ್ವಯಿಕ ಕಲಿಕಾ ಮನೋಭಾವನ್ನು ಪ್ರೋತ್ಸಾಹಿಸುವಂತೆ ಕಲಿಕಾ ಹಾಳೆಗಳಲ್ಲಿ ಚಟುವಟಿಕೆಗಳನ್ನು ನೀಡಲಾಗಿದೆ. ಈ ಕಲಿಕಾ ಹಾಳೆಗಳಲ್ಲಿನ ಚಟುವಟಿಕೆಗಳಿಗೆ ಪೂರಕವಾಗಿ “ಸಂಭ್ರಮ ಶನಿವಾರ’ ಚಟುವಟಿಕಾ ಪುಸ್ತಕಗಳನ್ನು ರೂಪಿಸಲಾಗಿದೆ. ಇದರಿಂದ ಪ್ರತಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‌ ರಹಿತ ದಿನ ಆಚರಿಸುವುದಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಮಾಸಿಕ ಸಮಾಲೋಚನಾ ಸಭೆಗಳು ನಡೆಯುವ ದಿನಗಳಂದು ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ “ಸಂಭ್ರಮ ಶನಿವಾರ’ವನ್ನು ಆಚರಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

2019ರಲ್ಲಿ ಆರಂಭವಾಗಿದ್ದ ಯೋಜನೆ
ಶಾಲಾ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂಬ ಉದ್ದೇಶದಿಂದ ತಿಂಗಳಲ್ಲಿ ಒಂದು ದಿನ ಬ್ಯಾಗ್‌ ರಹಿತ ದಿನ ಆಚರಿಸುವ ಸಂಬಂಧ 2019ರಲ್ಲಿಯೇ ಯೋಜನೆ ರೂಪಿಸಲಾಗಿತ್ತು. ಕೊರೊನಾ ಕಾರಣದಿಂದ ಎರಡು ವರ್ಷ ಯೋಜನೆಯನ್ನು ಅನುಷ್ಠಾನ ಮಾಡಿರಲಿಲ್ಲ. ಇದೀಗ, ಯೋಜನೆ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.