ಮತಾಂತರ ನಿಷೇಧ ಕಾಯಿದೆ: ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಎಳೆದು ತಂದ ಡಿಕೆಶಿ

ಮತಾಂತರ ನಿಷೇಧ ಕಾಯಿದೆ: ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಎಳೆದು ತಂದ ಡಿಕೆಶಿ

ಬೆಂಗಳೂರು, ಡಿ 22: ಬಲವಂತದ ಮತಾಂತರ ತಡೆ ಮಸೂದೆಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ಮಂಗಳವಾರ (ಡಿ 21) ಮಂಡಿಸಿದೆ. ನಿರೀಕ್ಷೆಯಂತೆ ವಿರೋಧ ಪಕ್ಷಗಳು ಇದಕ್ಕೆ ಭಾರೀ ವಿರೋಧವನ್ನು ವ್ಯಕ್ತ ಪಡಿಸಿದೆ, ಇದೊಂದು ಅಸವಿಂಧಾನಿಕ ನಡೆ ಎಂದು ಟೀಕಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಾಸಕರಿಗೆ ನೀಡಲಾಗುವ ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ.

"ಬೇರೆ ನೂತನ ಶಾಸಕರಾದರೆ ಒಪ್ಪಿಕೊಳ್ಳಬಹುದಾಗಿತ್ತು, ಹಿರಿಯವರಾದ ನೀವೇ ಈ ರೀತಿ ವರ್ತಿಸಿದರೆ ಹೇಗೆ" ಎಂದು ಸ್ಪೀಕರ್ ಕಾಗೇರಿಯವರು ಡಿಕೆಶಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಹಾಲಿ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸರಕಾರ ಸಂಪುಟ ಸಭೆಯಲ್ಲಿ ಅನುಮತಿಯನ್ನು ಪಡೆದುಕೊಂಡಿತ್ತು. ಆದರೆ, ಮಂಗಳವಾರವೇ ಇದನ್ನು ಮಂಡಿಸಲು ಹೊರಟಿದೆ ಎನ್ನುವ ಸುಳಿವು ವಿರೋಧ ಪಕ್ಷಗಳಿಗೆ ಇರಲಿಲ್ಲ.

ಭೋಜನ ವಿರಾಮದ ವೇಳೆ ಈ ಮಸೂದೆಯನ್ನು ಮಂಡಿಸಲು ಅನುಮತಿ ನೀಡಿರುವ ವಿಚಾರವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಚೇತಕರಿಗೆ ಮಾಹಿತಿ ನೀಡಲಾಗಿತ್ತು ಸ್ಪೀಕರ್ ಕಾಗೇರಿಯವರು ಹೇಳಿದ್ದಾರೆ. ಸಿಟ್ಟಿನ ಭರದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದ ಡಿ.ಕೆ.ಶಿವಕುಮಾರ್ ಅವರು ಈಗ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಮತಾಂತರ ಕಾಯಿದೆಯ ವಿಚಾರದಲ್ಲಿ ಪ್ರಸ್ತಾವಿಸಿದ್ದಾರೆ. ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಡಿ.ಕೆ.ಶಿವಕುಮಾರ್

ಆತುರದಲ್ಲಿ ಮಸೂದೆ ಮಂಡಿಸಿದ್ದಕ್ಕೆ ಏರು ಧ್ವನಿಯಲ್ಲಿ ಪ್ರತಿಭಟಿಸಿದ ಡಿ.ಕೆ.ಶಿವಕುಮಾರ್, ಮಸೂದೆಯ ಪ್ರತಿಯನ್ನು ಹರಿದು ಹಾಕಿದರು. "ಮಸೂದೆಯನ್ನು ಮಂಡಿಸಿದ ಮಾತ್ರಕ್ಕೆ ಅದು ಅನುಮೋದನೆಯಾಗಿದೆ ಎಂದು ಅರ್ಥವಲ್ಲ. ನಾಳೆ ಇಡೀ ದಿನ ಚರ್ಚೆಗೆ ಅವಕಾಶವನ್ನು ನೀಡುತ್ತೇನೆ. ನಿಮ್ಮ ಅಭಿಪ್ರಾಯ ಏನಿದ್ದರೂ ಸದನದಲ್ಲಿ ಮಂಡಿಸಲು ಅವಕಾಶವಿದೆ, ಅದು ಬಿಟ್ಟು ಹಿರಿಯರಾದ ನೀವು ಈ ರೀತಿ ವರ್ತಿಸುವುದು ಸದನಕ್ಕೆ ನೀವು ಕೊಡುವ ಅಗೌರವ"ಎಂದು ಸ್ಪೀಕರ್ ಕಾಗೇರಿಯವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ನಮ್ಮ ನಂಬಿಕೆ, ಜೈನ ಧರ್ಮದವರು ದೇವಾಲಯವನ್ನು ಮುನ್ನಡೆಸುತ್ತಿದ್ದಾರೆ

ಮಸೂದೆಯ ಬಗ್ಗೆ ಮಾಧ್ಯಮವರೊಂದಿಗೆ ಮಾತನಾಡಿದ ಡಿಕೆಶಿ, " ಶ್ರೀಕ್ಷೇತ್ರ ಧರ್ಮಸ್ಥಳ ನಮ್ಮ ನಂಬಿಕೆ, ಜೈನ ಧರ್ಮದವರು ದೇವಾಲಯವನ್ನು ಮುನ್ನಡೆಸುತ್ತಿದ್ದಾರೆ. ಅದೇ ಧರ್ಮದವರಾದ ವೀರೇಂದ್ರ ಹೆಗ್ಗಡೆಯವರು ಅಲ್ಲಿನ ಧರ್ಮಾಧಿಕಾರಿಗಳು. ಅವರು ಮಂಜುನಾಥಸ್ವಾಮಿಯ ಧರ್ಮಾಧಿಕಾರಿಗಳು. ಅವರು ಎಂದಾದರೂ ಜೈನ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಹೇಳಿದ್ದಾರಾ ಅಥವಾ ಅವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರಾ"ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ವೀರೇಂದ್ರ ಹೆಗ್ಗಡೆಯವರನ್ನು ಎಳೆದು ತಂದ ಡಿಕೆಶಿ

"ಸತ್ಯ ಎಂದರೆ ಅದು ಮಂಜುನಾಥ, ಅವರು ಏನಾದರೂ ಬದಲಾವಣೆ ತರಲು ಮುಂದಾದರಾ ಅಥವಾ ಇವರು ಬದಲಾವಣೆಯಾದರಾ? ನಮ್ಮ ನೆಲದ ಸಂಸ್ಕೃತಿ ಏನು ಹೇಳುತ್ತದೆ ಎಂದರೆ, ಶಾಲೆ, ಆಸ್ಪತ್ರೆಗಳು ಬಲವಂತದ ಮತಾಂತರ ಮಾಡಿದರೆ ಅದು ತಪ್ಪು, ಆ ರೀತಿಯ ಒಂದೇ ಒಂದು ಉದಾಹರಣೆಗಳಿವೆಯಾ? ಚುನಾವಣೆಯಲ್ಲಿ ಸೋಲುತ್ತಿದ್ದೀರಾ ಎಂದು, ಜನ ನಿಮಗೆ ವಿರೋಧವಾಗಿದ್ದಾರೆ ಎಂದು ಈ ರೀತಿಯ ಕಾನೂನು ತಂದರೆ ಹೇಗೆ. ನಿಮಗೆ ಜನಪರ ಕೆಲಸ ಮಾಡಬೇಕೆಂದಿದ್ದರೆ ಕೊರೊನಾದಲ್ಲಿ ಮೃತ ಪಟ್ಟವರಿಗೆ ಪರಿಹಾರವನ್ನು ನೀಡಿ"ಎಂದು ಡಿ.ಕೆ.ಶಿವಕುಮಾರ್ ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಬೆಳಗಾವಿಯಲ್ಲಿ ಅಧಿವೇಶನ ಕರೆದದ್ದು ಯಾಕೆ "ಯುವಕರಿಗೆ ಉದ್ಯೋಗ ಕೊಡಲು ನಿಮ್ಮಿಂದ ಆಗಲಿಲ್ಲ, ರೈತರಿಗೆ ಸಹಾಯ ಮಾಡಲು ಆಗಲಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ಕರೆದದ್ದು ಯಾಕೆ, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು, ಮತಾಂತರ ನಿಷೇಧ ಮಸೂದೆ ಆತುರಾತುರವಾಗಿ ಮಂಡಿಸುವ ಅವಶ್ಯಕತೆಯಾದರೂ ಏನಿತ್ತು? ಸದನದ ಹೊರಗೆ ಅಷ್ಟೊಂದು ಪ್ರತಿಭಟನೆಗಳು ನಡೆಯುತ್ತಿವೆ, ಒಬ್ಬ ಸಚಿವರಾದರೂ ಅವರ ಸಮಸ್ಯೆಗೆ ಸ್ಪಂದಿಸಲಿಲ್ಲ"ಎಂದು ಡಿ.ಕೆ.ಶಿವಕುಮಾರ್ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.