ತಂತ್ರಜ್ಞಾನದ ಆ ಮುಖ ಈ ಮುಖ: ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ
ಜೈಪುರ್: ತಂತ್ರಜ್ಞಾನವನ್ನು ಭಾರತವು ಸಬಲೀಕರಣಕ್ಕೆ ಬಳಸುತ್ತಿದೆ. ಅಮೆರಿಕದಲ್ಲಿ ಅದು ಖಾಸಗೀತನವಾಗಿದೆ ಎಂದು ಉದ್ಯಮಿ ಹಾಗೂ ತಂತ್ರಜ್ಞಾನ ಪರಿಣತ ನಂದನ್ ನಿಲೇಕಣಿ ಹೇಳಿದರು.
ಜೈಪುರ ಸಾಹಿತ್ಯೋತ್ಸವ ದಲ್ಲಿ ಭಾನುವಾರ 'ದಿ ಆರ್ಟ್ ಆಫ್ ಬಿಟ್‌ಫುಲ್‌ನೆಸ್: ಕೀಪಿಂಗ್ ಕಾಮ್ ಇನ್ ದಿ ಡಿಜಿಟಲ್ ವರ್ಲ್ಡ್' ಎಂಬ ಗೋಷ್ಠಿಯಲ್ಲಿ ಅವರು ಡಿಜಿಟಲ್ ಜಗತ್ತಿನ ಕುರಿತು ವಿಚಾರಲಹರಿಯನ್ನು ಹಂಚಿಕೊಂಡರು.
'ಭಾರತದಲ್ಲಿ ಡಿಜಿಟಲ್ ವೇದಿಕೆಯು ಸಬಲೀಕರಣಕ್ಕೆ ಸಮರ್ಥವಾಗಿ ಬಳಕೆಯಾಗುತ್ತಿದ್ದರೆ, ಚೀನಾದಲ್ಲಿ ಸರ್ಕಾರವೇ ಅದು ಹೇಗಿರಬೇಕು ಎಂದು ನಿರ್ಧರಿಸುವ ವಾತಾವರಣವಿದೆ. ತಂತ್ರಜ್ಞಾನದಲ್ಲಿ ಪುಷ್ ಹಾಗೂ ಪುಲ್ ಎನ್ನುವ ಮಾದರಿಗಳಿವೆ. ನಮಗೆ ಬೇಕಾದದ್ದನ್ನು ಹುಡುಕಿ ಅರಿಯುವುದು ಪುಲ್ ಮಾದರಿ. ನಮಗೆ ಏನು ಬೇಕು ಎಂದು ಮಾಹಿತಿ ಪೂರೈಸುವವರು ನಿರ್ಧರಿಸಿ ಅದರತ್ತ ನಮ್ಮನ್ನು ಸೆಳೆಯುವಂತೆ ಮಾಡುವುದು ಪುಷ್ ಮಾದರಿ. ಇದರಲ್ಲಿ ಜಾಹೀರಾತುಗಳೂ ಗಾಳ ಹಾಕುತ್ತಿರುತ್ತವೆ. ತಂತ್ರಜ್ಞಾನವನ್ನು ಕೈವಶ ಮಾಡಿಕೊಂಡು, ಅದನ್ನು ನಮ್ಮ ಅಗತ್ಯಕ್ಕೆ ಒಗ್ಗಿಸಿಕೊಳ್ಳುವ ಜಾಣ್ಮೆ ನಮಗೆ ಬಿಟ್ಟಿದ್ದು' ಎಂದು ಹೇಳಿದರು.
'ಡ್ರೋನ್ ತಂತ್ರಜ್ಞಾನ ಬಂದಾಗ ಅದನ್ನು ನಿರ್ಬಂಧಿಸುವಂತೆ ಆಗ್ರಹಿಸುತ್ತಾರೆ. ಬಯೋಟೆಕ್ನಾಲಜಿಯಲ್ಲಿ ಹೊಸತು ಬಂದಾಗ, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಹೊಸ ಅನ್ವೇಷಣೆ ನಡೆದಾಗ ಅದನ್ನು ಬೇಡ ಎನ್ನುವವರೂ ಭಾರತದಲ್ಲಿದ್ದಾರೆ. ಇದು ನಮ್ಮ ವಿರೋಧಾಭಾಸ ಧೋರಣೆಗೆ ಸಾಕ್ಷಿ' ಎಂದು ಅನಿರುದ್ಧ್ ಸೂರಿ ಗಮನ ಸೆಳೆದರು.
'ಅನುಮತಿ ಬೇಡದ ಸಂಶೋಧನೆ ಮತ್ತು ಅನುಮತಿಯ ಅಗತ್ಯ ಇರುವ ಸಂಶೋಧನೆ ಎಂಬ ಎರಡು ಬಗೆಗಳಿವೆ. ಎರಡನೆಯದಕ್ಕೆ ಸರ್ಕಾರದ ಅನುಮತಿ ಬೇಕು ಎಂದು ನಿಲೇಕಣಿ ಹೇಳಿದರು.
2022ರಲ್ಲಿ ತಮ್ಮ ಪರಿಚಯದ ಒಬ್ಬ ಮಹಿಳೆ ವಾಟ್ಸ್‌ಆಯಪ್ ಗ್ರೂಪ್ ಮಾಡಿ, ಮಕ್ಕಳ ಲಾಲನೆ-ಪಾಲನೆಯ ಕುರಿತು ಮಾಹಿತಿ ಹಂಚಿಕೊಳ್ಳಲಾರಂಭಿಸಿದ್ದನ್ನು ನಂದನ್ ನಿಲೇಕಣಿ ಉದಾಹರಿಸಿದರು. ಇದಕ್ಕೆ ಹಲವರು ಪೂರಕ ಅಂಶಗಳನ್ನು ಸೇರಿಸಿದರು. ಹೀಗಾಗಿ ಡಿಜಿಟಲ್ ವೇದಿಕೆಯೊಂದನ್ನು ಸಮರ್ಥವಾಗಿ ಬಳಸಿಕೊಂಡಂತೆ ಆಯಿತು. ಕೆಲವರು ಇದನ್ನು ಕೆಟ್ಟ ರೀತಿಯಲ್ಲೂ ಬಳಸಿಕೊಳ್ಳುತ್ತಾರೆ ಎಂದು ತಂತ್ರಜ್ಞಾನದ ಎರಡು ಮುಖಗಳನ್ನು ಬಿಚ್ಚಿಟ್ಟರು.