ಖಾಸಗಿಗೆ ನೀರು ಪೂರೈಕೆ, ನಿರ್ವಹಣೆ ಜವಾಬ್ದಾರಿಗೆ ಖಂಡನೆ

ಖಾಸಗಿಗೆ ನೀರು ಪೂರೈಕೆ, ನಿರ್ವಹಣೆ ಜವಾಬ್ದಾರಿಗೆ ಖಂಡನೆ

ಹುಬ್ಬಳ್ಳಿ: ಅವಳಿನಗರದಲ್ಲಿ ನೀರು ಪೂರೈಕೆ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿರುವುದನ್ನು ಖಂಡಿಸಿ, ಎಎಪಿ ಕಾರ್ಯಕರ್ತರು ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಪಾಲಿಕೆಯ ಮುಖ್ಯ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ಎಲ್ ಅಂಡ್ ಟಿ ಕಂಪನಿಗೆ ನೀರು ಪೂರೈಕೆಯ ಹೊಣೆಯನ್ನು ಕೊಟ್ಟಿರುವುದರ ಹಿಂದೆ, ಇಡೀ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಇದರಿಂದಾಗಿ, ಮಹಾನಗರದ ಜನರು ಕುಡಿಯುವ ನೀರಿಗಾಗಿ ಹೆಣಗಾಡುವ ಸ್ಥಿತಿ ಬಂದಿದೆ. ಸಾರ್ವಜನಿಕ ನಳಗಳು ಬಂದ್ ಆಗಿ, ಬಡವರು ಪರದಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.

ನೀರಿನ ಸಮಸ್ಯೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಇತ್ತೀಚೆಗೆ ಎಲ್ ಅಂಡ್ ಟಿ ಜೊತೆಗೆ ಸರಣಿ ಸಭೆ ಮಾಡಿರುವುದು ಸಮಸ್ಯೆಯ ಗಂಭೀರತೆಯನ್ನು ತಿಳಿಸುತ್ತದೆ. ಪಕ್ಷ ಕೂಡ ಜೀವಜಲ ಜನ ಜಾಗೃತಿ (ಜೆ4) ಅಭಿಯಾನವನ್ನು ಅವಳಿನಗರದಲ್ಲಿ ನಡೆಸಲಿದೆ. ನೀರು ಪೂರೈಕೆಯ ಖಾಸಗೀಕರಣದಿಂದಾಗುವ ಸಮಸ್ಯೆಗಳನ್ನು ಮನೆಮನೆಗೆ ತಿಳಿಸುವ ಕೆಲಸ ಮಾಡಲಿದೆ ಎಂದರು.

ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಖಾಸಗಿ ಕಂಪನಿ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸಬೇಕು. ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.