ಮಂಡ್ಯದಲ್ಲಿ ಮೇಕೆ ಹಿಡಿಯಲು ಬಂದು ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದ ಚಿರತೆ: ಇಬ್ಬರು ಗಾಯಾಳು
ಮಂಡ್ಯ , ಫೆಬ್ರವರಿ. 10: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ದಂಪತಿಯನ್ನು ಗಾಯಗೊಳಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಬುಧವಾರ ರಾತ್ರಿ 2 ಗಂಟೆ ಸುಮಾರಿಗೆ ಮೂಡನಹಳ್ಳಿ ಗ್ರಾಮದ ನಿಂಗೇಗೌಡ ಎಂಬುವವರ ತೋಟದ ಮನೆಗೆ ನುಗ್ಗಿದ ಚಿರತೆ ಮನೆಯಲ್ಲಿದ್ದ ಇಬ್ಬರ ಮೇಲೆ ದಾಳಿ ಮಾಡಿತ್ತು
ಮನೆಗೆ ನುಗ್ಗಿದ ಚಿರತೆ ಕೊಟ್ಟಿಯಲ್ಲಿದ್ದ ಮೇಕೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ ರೈತ ನಿಂಗೇಗೌಡ (75) ಮತ್ತು ಅವರ ಪತ್ನಿ ಗೌರಮ್ಮ ಅವರ ಮೇಲೂ ಚಿರತೆ ದಾಳಿ ಮಾಡಿತ್ತು. ಇಬ್ಬರು ಗಾಯಗೊಂಡಿದ್ದು, ಅವರ ಕೂಗಾಟ ಕೇಳಿ ಜನರು ಗುಂಪುಗೂಡಿದ್ದಾರೆ. ಜನರನ್ನು ಕಂಡು ಬೆದರಿದ ಚಿರತೆ ರೇಷ್ಮೆ ಸಾಕಾಣಿಕೆ ಮನೆಗೆ ನುಗ್ಗಿದೆ. ಅಲ್ಲಿಯೇ ಅನ್ನು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಬಂಧಿಸಲಾಗಿತ್ತು.
ವೃದ್ಧ ದಂಪತಿಯನ್ನು ಗಾಯಗೊಳಿಸಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಸೆರೆ ಹಿಡಿದಿದ್ದಾರೆ. ಈ ಹಿಂದೆಯೂ ಈ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಕುರಿ, ಮೇಕೆಗಳನ್ನು ಬೇಟೆಯಾಡಲು ಹಳ್ಳಿಗೆ ನುಗ್ಗಿತ್ತು.
ದಂಪತಿ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅವರ ಸಹಾಯಕ್ಕೆ ಧಾವಿಸಿ ಗಾಯಗೊಂಡ ನಿಂಗೇಗೌಡರನ್ನು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಕೈಗಳಿಗೆ ಪರಚಿದ ಗಾಯವಾಗಿದ್ದ ಅವರ ಪತ್ನಿ ಗೌರಮ್ಮಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದಾರೆ.
ಇನ್ನು, ಜಿಲ್ಲೆಯ ಕೊಳಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ಸಿಕ್ಕ ಎರಡು ಚಿರತೆ ಮರಿಗಳನ್ನು ಯುವಕರ ಗುಂಪೊಂದು ಮನೆಗೆ ತೆಗೆದುಕೊಂಡು ಬಂದಿದೆ. ಇದಾಗಿ ಕೆಲವೇ ಗಂಟೆಗಳಲ್ಲಿ ಅರಣ್ಯಾಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಳಗೆರೆ ಗ್ರಾಮದ ಜಮೀನಿನ ಬಳಿಯ ಕಲ್ಲುಬಂಡೆಯ ಕೆಳಗೆ ಸಿಲುಕಿದ್ದ ಎರಡು ಚಿರತೆ ಮರಿಗಳನ್ನು ಶಿವಮೂರ್ತಿ, ಕೀರ್ತಿ ಕುಮಾರ್ ಮತ್ತು ಅವರ ಸ್ನೇಹಿತರು ರಕ್ಷಿಸಿದ್ದಾರೆ. ಯುವಕರು ಗ್ರಾಮಕ್ಕೆ ಚಿರತೆ ಮರಿಗಳನ್ನು ಕೊಂಡೊಯ್ದ ಬಳಿಕ ನೂರಾರು ಗ್ರಾಮಸ್ಥರು ಮರಿಗಳನ್ನು ನೋಡಲು ಮುಗಿಬಿದ್ದರು. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಇದು ಅಪರಾಧವಾಗಿದ್ದು, ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.