ಪಟಾಕಿ ಗಾಯ: ಮಿಂಟೊದಲ್ಲಿ 24 ಗಂಟೆ ಸೇವೆ

ಪಟಾಕಿ ಗಾಯ: ಮಿಂಟೊದಲ್ಲಿ 24 ಗಂಟೆ ಸೇವೆ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದರೆ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಮಿಂಟೊ ಕಣ್ಣಿನ ಆಸ್ಪತ್ರೆಯು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಹಬ್ಬದ ದಿನಗಳಲ್ಲಿ 24x7 ವೈದ್ಯಕೀಯ ಸೇವೆ ನೀಡಲು ಆಸ್ಪತ್ರೆ ಮುಂದಾಗಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್, 'ಹಸಿರು ಪಟಾಕಿಗಳಲ್ಲಿಯೂ ರಾಸಾಯನಿಕಗಳು ಇರುತ್ತವೆ. ಹಾಗಾಗಿ, ಅವುಗಳಿಂದಲೂ ಕಣ್ಣಿಗೆ ಅಪಾಯವಿದೆ. ಪಟಾಕಿಯ ಕಿಡಿಗಳು ಕಣ್ಣಿನ ಮೇಲೆ ಬಿದ್ದಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೀಪಾವಳಿಯ ಸಂರ್ಭದಲ್ಲಿ ಬೆಳಕಿನಿಂದ ಕತ್ತಲೆಗೆ ಹೋಗಬಾರದು. ಎಲ್ಲ ರೀತಿಯ ಪಟಾಕಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡಬೇಕಿದೆ. ಆದರೆ, ಆ ಉದ್ಯಮವನ್ನು ನಂಬಿಕೊಂಡವರ ಬಗ್ಗೆಯೂ ಗಮನ ಹರಿಸಬೇಕಲ್ಲ' ಎಂದರು.

'ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ' ಎಂದು ಹೇಳಿದರು.

ಪ್ರತ್ಯೇಕ ವಾರ್ಡ್: 'ಪಟಾಕಿ ಗಾಯಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮೀಸಲಿಡಲಾಗುತ್ತದೆ. 30 ಹಾಸಿಗೆಗಳು ಈ ವಾರ್ಡ್‌ನಲ್ಲಿ ಇರಲಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ಒಂದು ವಾರ ರಜೆ ಇರುವುದಿಲ್ಲ. ಪಟಾಕಿ ಅವಘಡಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಆದರೂ ಇನ್ನಷ್ಟು ಜಾಗೃತಿ ಅಗತ್ಯವಿದೆ' ಎಂದರು.

‌'ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳುವುದು ಮಾಡಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಹೊಡೆದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ಅರಿವಿಲ್ಲದೆಯೇ ಮೆಟ್ಟುವುದು ತಪ್ಪಲಿದೆ' ಎಂದು ತಿಳಿಸಿದರು.

'ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿಯಿದ್ದು, ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗೆ ದಾಖಲಾಗುವವರಲ್ಲಿ ಶೇ 40ರಷ್ಟು ಗಾಯಾಳುಗಳು 14 ವರ್ಷದ ಒಳಗಿನವರಾಗಿದ್ದಾರೆ. ಹಾಗಾಗಿ, ಮಕ್ಕಳು ಸೇರಿ ಎಲ್ಲ ವಯೋಮಾನದವರು ಮುನ್ನೆಚ್ಚರಿಕೆಗೆ ಕ್ರಮಗಳನ್ನು ಪಾಲಿಸಬೇಕು. ಕಳೆದ ವರ್ಷ ಏಳು ಮಂದಿ ಕಣ್ಣಿಗೆ ಗಂಭೀರ ಹಾನಿಯಾಗಿತ್ತು. ಅವರಲ್ಲಿ ಇಬ್ಬರು ದೃಷ್ಟಿ ಕಳೆದುಕೊಂಡಿದ್ದಾರೆ' ಎಂದರು.

ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ (ಆರ್‌ಎಂಓ) ಡಾ. ಹರೀಶ್ ಇದ್ದರು.

ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸಹಾಯವಾಣಿ: