ಕಡಲೆಗೆ ಕೀಟನಾಶಕ ಸಿಂಪಡಿಸಲು ಯಂತ್ರ ಬಳಕೆ: ಕಾರ್ಮಿಕರ ಕೊರತೆಗೆ ಪರ್ಯಾಯ ಮಾರ್ಗ ಕಂಡುಕೊಂಡ ರೈತ ವೀರಣ್ಣ
ಅಳವಂಡಿ: ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಘಟ್ಟಿರಡ್ಡಿಹಾಳ ಗ್ರಾಮದ ರೈತರೊಬ್ಬರು ಟ್ರಾೃಕ್ಟರ್‌ಗೆ ಯಂತ್ರ ಅಳವಡಿಸಿ ಅದರಿಂದ ಕಡಲೆ ಸೇರಿ ಇತರ ಬೆಳೆಗೆ ಕೀಟನಾಶಕ ಸಿಂಪಡಿಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.
ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಡಲೆ ಬಿತ್ತನೆ ಕ್ಷೇತ್ರ ಹೆಚ್ಚಿದೆ. ಈಚೆಗೆ ಸುರಿದ ಮಳೆಗೆ ಬೆಳೆ ನಳನಳಿಸುತ್ತಿದೆ. ಕೃಷಿ ಚಟುವಟಿಕೆ ಚುರುಕು ಪಡೆದಿರುವುದರಿಂದ ಔಷಧ ಸಿಂಪಡಿಸಲು ಕೂಲಿ ಕಾರ್ಮಿಕರು ಕೈಗೆ ಸಿಗುತ್ತಿಲ್ಲ. ಮನೆಗೆ ಹೋಗಿ ಕರೆದರೂ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಹೀಗಾಗಿ ಘಟ್ಟರಡ್ಡಿಹಾಳ ಗ್ರಾಮದ ರೈತ ವೀರಣ್ಣ ಶಿವಲಿಂಗಪ್ಪ ಡಂಬಳ, ಜಮೀನಿನಲ್ಲಿ ಬೆಳೆದ ಕಡಲೆ, ಸೂರ್ಯಕಾಂತಿ, ಜೋಳ ಮುಂತಾದ ಬೆಳೆಗಳಿಗೆ ಟ್ರಾೃಕ್ಟರ್-ಯಂತ್ರದ ಮೂಲಕ ಕೀಟನಾಶಕ ಸಿಂಪಡಿಸಲು ಮುಂದಾಗಿದ್ದು, ಆಳುಗಳ ಕೊರತೆ ನೀಗಿದಂತಾಗಿದೆ. ಸಕಾಲಕ್ಕೆ ಬೆಳೆಗಳಿಗೂ ಔಷಧ ಸಿಂಪಡಿಸಲು ಸಾಧ್ಯವಾಗಿದೆ.
ಈ ಮೊದಲು ತೋಟಗಾರಿಕೆ ಬೆಳೆಗಳಿಗೆ ಸಾಲುಗಳ ಮಧ್ಯೆ ಅಂತರ ಜಾಸ್ತಿ ಇರುವುದರಿಂದ ಟ್ರಾೃಕ್ಟರ್ ಮೂಲಕ ಕೀಟನಾಶಕ ಸಿಂಪಡಿಸಲಾಗುತ್ತಿತ್ತು. ಆದರೆ ಕೃಷಿ ಬೆಳೆಗೆ ಬಳಸಲು ಸಾಧ್ಯವಾಗಿರಲಿಲ್ಲ. ರೈತ ವೀರಣ್ಣ ಡಂಬಳ, ಅದನ್ನು ಸಾಧಿಸಿ ತೋರಿಸಿದ್ದಾರೆ. 1.60 ಲಕ್ಷ ರೂ. ವೆಚ್ಚದಲ್ಲಿ ಕೀಟನಾಶಕ ಸಿಂಪಡಣೆ ಯಂತ್ರ ಖರೀದಿಸಿದ್ದು, ಟ್ರಾೃಕ್ಟರ್‌ಗೆ ಸಣ್ಣ ಅಳತೆಯ ನಾಲ್ಕು ಗಾಲಿಗಳನ್ನು ಅಳವಡಿಸಿ ಏಕಕಾಲಕ್ಕೆ 15 ರಿಂದ 20 ಸಾಲುಗಳಿಗೆ ಔಷಧ ಸಿಂಪಡಿಸುತ್ತಿದ್ದಾರೆ. ಇದರಿಂದ ಆಳಿನ ಖರ್ಚು ಕಡಿಮೆ ಆಗಲಿದ್ದು, ಸಮಯವೂ ಉಳಿಯುತ್ತಿದೆ. ಇದು ಇತರರಿಗೂ ಮಾದರಿಯಾಗಿದೆ.