ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ

ಕೋಲಾರ

ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ ಸಮಿತಿ ಅಡಿಯಲ್ಲಿ ವಿವಿಧ ರೈತ, ದಲಿತ ಪ್ರಗತಿಪರ ಸಂಘಟನೆಗಳು ನಡೆಸಿದ ಬಂದ್‍ಗೆ ಕೋಲಾರದಲ್ಲಿ ಮಿಶ್ರ ವ್ಯಕ್ತವಾಗಿದೆ. ಪ್ರಗತಿಪರ ಸಂಘಟನೆ ಹಾಗೂ ಕಾಂಗ್ರೆಸ್‍ನ ಕಿಸಾನ್ ಘಟಕವು ಈ ವೇಳೆ ಬೈಕ್ ರ್ಯಾಲಿ ನಡೆಸಿತು. ಕೋಲಾರ ನಗರ, ವೇಮಗಲ್, ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ,ಕೆ.ಜಿ.ಎಫ್ ಪಟ್ಟಣಗಳಲ್ಲಿ ವಿವಿಧ ಸಂಘಟನೆಗಳು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು, ಕೆಲವು ತಾಲ್ಲೂಕುಗಳಲ್ಲಿ ಮುಖ್ಯ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೇಮಗಲ್ ನಲ್ಲಿ ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೋಲಾರದಲ್ಲಿ ಕೆ.ಪಿ.ಆರ್.ಎಸ್ ಅಧ್ಯಕ್ಷ ಟಿ. ಎಂ. ವೆಂಕಟೇಶ್, ರೈತ ಸಂಘದ ಅಬ್ಬಿಣಿ ಶಿವಪ್ಪ, ರಾಮುಶಿವಣ್ಣ, ವೇಮಗಲ್‍ನಲ್ಲಿ ಮೇಡಿಹಾಳ ಮುನಿಆಂಜಿನಪ್ಪ, ಮುನಿಯಪ್ಪ, ಮುಳಬಾಗಿಲಿನಲ್ಲಿ ಸಂಗಸಂದ್ರ ವಿಜಯಕುಮಾರ್, ಕೆಜಿಎಫ್‍ನಲ್ಲಿ ತಂಗರಾಜ್, ಬಂಗಾರಪೇಟೆಯಲ್ಲಿ ಪಿ. ಸಿ. ಶ್ರೀನಿವಾಸ, ರಾಮೇಗೌಡ, ಮರಗಲ್ ಶ್ರೀನಿವಾಸ್, ರಾಜಪ್ಪ ನೇತೃತ್ವದಲ್ಲಿ ಬಂದ್ ನೇತೃತ್ವ ವಹಿಸಿದ್ದಾರೆ.