ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಯತ್ನ: ಕರವೇ ಅಧ್ಯಕ್ಷ ನಾರಾಯಣಗೌಡ ಪೊಲೀಸ್ ವಶಕ್ಕೆ
ಬೆಳಗಾವಿ, ಡಿಸೆಂಬರ್ 20: ಎಂಇಎಸ್ ಪುಂಡಾಟ ಖಂಡಿಸಿ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆ ವೇಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಹೀರೇಬಾಗೇವಾಡಿ ಟೋಲ್ ಬಳಿ ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಎಂಇಎಸ್ ಪುಂಡಾಟ ಖಂಡಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿದೆ. ಹೀಗಾಗಿ ಪೊಲೀಸರ ವಿರುದ್ಧ ಕರವೇ ಕಾರ್ಯಕರ್ತರು ಕಿಡಿ ಕಾರಿದ್ದಾರೆ. ಬೆಳಗಾವಿ ಹೊತ್ತಿ ಉರಿಯುತ್ತಿದ್ದರೆ ಸಚಿವರು ಮೌನವಾಗಿದ್ದಾರೆ. ಎಂಇಎಸ್ ಓಲೈಸಿ ವೋಟಿಂಗ್ ರಾಜಕಾರಣ ಮಾಡಲಾಗುತ್ತಿದೆ ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬೆಳಗಾವಿಯ ಅನಗೋಳದ ಕನಕದಾಸ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಶನಿವಾರ ಬೆಳಗಿನ ಜಾವ ಭಗ್ನಗೊಳಿಸಿದ್ದಾರೆ. ತಿಲಕವಾಡಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆದಿದ್ದರು. ಎಂಇಎಸ್ ಪುಂಡರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಿ ಸೋಮವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಎಂಇಎಸ್ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈವರೆಗೆ ರಾಜ್ಯದಲ್ಲಿ ಎಂಇಎಸ್ ಪುಂಡರ ಪುಂಡಾಟವನ್ನು ಸಹಿಸಿಕೊಂಡು ಬರಲಾಗಿದೆ. ಜೊತೆಗೆ ಎಂಇಎಸ್ ಓಲೈಸುವ ಮೂಲಕ ರಾಜ್ಯ ಸರ್ಕಾರ ವೋಟ್ ಬ್ಯಾಂಕಿಂಗ್ ರಾಜಕಾರಣ ಮಾಡುತ್ತಿದೆ ಎಂದು ಕರವೇ ಆರೋಪಿಸಿದೆ. ಹೀಗಾಗಿ ಆಡಳಿತ ಪಕ್ಷ ಕರ್ನಾಟಕದ ನೆಲದ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತ ಕೆಲಸ ಮಾಡಬೇಕು ಎಂದು ಕರವೇ ಮನವಿ ಮಾಡಿದೆ.
ಇನ್ನೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸದನದಲ್ಲಿ ಇಂದು ಆಡಳಿತ ಪಕ್ಷದ ಮುಂದೆ ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. 'ಎಂಇಎಸ್ ಬ್ಯಾನ್ ಬಗ್ಗೆ ನಾನು ಸದನದಲ್ಲಿ ಮಾತನಾಡುತ್ತೇನೆ. ಕೆಲವು ಪುಂಡರು ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಅದು ಅತ್ಯಂತ ಖಂಡನೀಯ ವಿಚಾರ. ರಾಯಣ್ಣ ಯಾವುದೇ ಜಾತಿ ಸಮಾಜಕ್ಕೆ ಸೇರಿದ ವ್ಯಕ್ತಿ ಅಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ದೇಶಭಕ್ತ. ಅಂತ ವ್ಯಕ್ತಿಯ ಪ್ರತಿಮೆಯನ್ನು ವಿರೂಪಗೊಳಿಸಿದವರು ಪುಂಡರಿರಬೇಕು ಇಲ್ಲ ಸಮಾಜದಲ್ಲಿ ಶಾಂತಿ ಕದಡುವಂತವರಾಗಿರಬೇಕು. ಅವರ ವಿರುದ್ಧ ಕ್ರಮಕ್ಕೆ ನಾನು ಸದನದಲ್ಲಿ ಧ್ವನಿ ಎತ್ತುತ್ತೇನೆ. ಸರ್ಕಾರದ ಗಮನ ಸೆಳೆಯುವಂತ ಪ್ರಯತ್ನ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಇನ್ನೂ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳಿಗೆ ಅವಕಾಶ ಕೊಡುತ್ತಿಲ್ಲ, ಆದರೆ ಎಂಇಎಸ್‌ಗೆ ಅವಕಾಶ ನೀಡುತ್ತಾರೆ ಎನ್ನುವ ಪ್ರಶ್ನೆಗೆ, 'ಎಂಇಎಸ್ ಗೆ ಯಾವುದೇ ಕಾನೂನು ಕಾಯ್ದೆ ಇಲ್ಲ. ಆಯುಧಗಳನ್ನು ಹಿಡಿದು ದಾಳಿ ಮಾಡ್ತಾರೆ ಅಂದರೆ ಅವರಿಗೆ ಭಯ ಇಲ್ಲ. ಸರ್ಕಾರಕ್ಕೆ ಹಿಡಿತ ಇಲ್ಲ. ಲಾ ಆಂಡ್ ಆರ್ಡರ್ ಫೇಲ್ ಆಗಿದೆ. ನಾನು ಈ ಬಗ್ಗೆ ಸದಸನದಲ್ಲಿ ಮಾತನಾಡುತ್ತೇನೆ. ನಿಮ್ಮ ಧ್ವನಿಗೆ ನಾವು ಧ್ವನಿ ಆಗುತ್ತೇವೆ'
ಈ ಬಗ್ಗೆ ಧ್ವನಿ ಎತ್ತಿದ ಕನ್ಡಪರ ಹೋರಾಟಗಾರ ವಾಟಾಳ್ ನಾಗರಾಜ್, "ಎಂಇಎಸ್ ಸಂಘಟನೆ ನಿಷೇಧಕ್ಕೆ ಸರ್ಕಾರ ಸದನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಸದನದಲ್ಲಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ ಬಂದ್ ಮಾಡುವುದು ಖಚಿತ. ಕರ್ನಾಟಕ ಬಂದ್ ನಾವು ಕರೆ ನೀಡುತ್ತೇವೆ. ಬುಧುವಾಋ ಎಲ್ಲಾ ಸಂಘಟನೆಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು, ಬೆಳಗಾವಿ ಮಾತ್ರದಲ್ಲದೆ ಚಿತ್ರದುರ್ಗ, ಯಾದಗಿರಿ, ರಾಯಚೂರಿನಲ್ಲೂ ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ.