'6 ರಿಂದ 8 ವಾರಗಳಲ್ಲಿ ಕರೊನಾ ಮೂರನೇ ಅಲೆ ಸಾಧ್ಯತೆ'

ನವದೆಹಲಿ : ಕರೊನಾ ಮೂರನೇ ಅಲೆಯು ಮುಂದಿನ ಆರರಿಂದ ಎಂಟು ವಾರಗಳಲ್ಲಿ ಅಪ್ಪಳಿಸಬಹುದು ಎಂದು ದೆಹಲಿಯ ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯ ಅವರು ಎಚ್ಚರಿಸಿದ್ದಾರೆ. ಈ ಮುನ್ನ ಸಾಂಕ್ರಾಮಿಕರೋಗತಜ್ನರು ಕರೊನಾ ಮೂರನೇ ಅಲೆ ಅನಿವಾರ್ಯ ಮತ್ತು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಆರಂಭವಾಗಲಿದೆ ಎಂದು ಹೇಳಿದ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಗುಲೇರಿಯ, 'ಕೋವಿಡ್-ಸೂಕ್ತ ನಡವಳಿಕೆಯನ್ನು ಪಾಲಿಸದಿದ್ದರೆ 6-8 ವಾರಗಳಲ್ಲಿ 3ನೇ ಅಲೆ ಸಂಭವಿಸಬಹುದು. ಲಸಿಕಾಕರಣವು ಉತ್ತಮ ಗತಿ ಗಳಿಸುವವರೆಗೆ ನಾವು ಮತ್ತೊಂದು ದೊಡ್ಡ ಕರೊನಾ ಅಲೆ ಉಂಟಾಗದಂತೆ ತಡೆಯಲು ಪೂರ್ಣ ಪ್ರಯತ್ನ ಮಾಡಬೇಕು' ಎಂದಿದ್ದಾರೆ.
ದೊಡ್ಡ ಪ್ರಮಾಣದ ಜನಸಂಖ್ಯೆಗೆ ಲಸಿಕೆ ನೀಡಲಾಗುವ ತನಕ, ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಗಂಭೀರತೆಯಿಂದ ಪಾಲಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಸಾಂಕ್ರಾಮಿಕವನ್ನು ನಿಯಂತ್ರಿಸುವ ಕ್ರಮದ ಬಗ್ಗೆ ಮಾತನಾಡಿದ ಅವರು, ಆರ್ಥಿಕ ವ್ಯವಸ್ಥೆಯ ಮೇಲೆ ವಿಪರೀತ ಪ್ರಭಾವ ಹೊಂದಿದ ರಾಷ್ಟ್ರಮಟ್ಟದ ಲಾಕ್ಡೌನ್ ಪರಿಹಾರವಲ್ಲ. ಕೋವಿಡ್ ಹಾಟ್ಸ್ಪಾಟ್ಗಳನ್ನು ಗುರುತಿಸಿ, ಸೋಂಕಿನಲ್ಲಿ ತೀವ್ರ ಏರಿಕೆ ಕಂಡಾಗ ಮಾತ್ರ ಲಾಕ್ಡೌನ್ ಮಾಡಬೇಕಾದೀತು ಎಂದಿದ್ದಾರೆ.