ಐಪಿಎಲ್: ಲಖನೌ ತಂಡದ ಸಲಹೆಗಾರರಾಗಿ ಗೌತಮ್ ಗಂಭೀರ್ ನೇಮಕ

ಲಖನೌ: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು, ಲಖನೌ ಐಪಿಎಲ್ ತಂಡದ ಸಲಹೆಗಾರರಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಯಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದ ಬಳಿಕ ಸಂಜೀವ್ ಗೋಯೆಂಕಾ ಒಡೆತನದ ಆರ್ಪಿಎಸ್ಜಿ ಗ್ರೂಪ್ ಮಾಡಿದ ಎರಡನೇ ದೊಡ್ಡ ಘೋಷಣೆ ಇದಾಗಿದೆ.
2016 ಮತ್ತು 17ರಲ್ಲಿ ಐಪಿಎಲ್ನ ಪುಣೆ ಸೂಪರ್ಜಿಯಂಟ್ ತಂಡದ ಫ್ರಾಂಚೈಸಿ ಪಡೆದಿದ್ದ ಕೋಲ್ಕತ್ತಾ ಮೂಲದ ಕಂಪನಿಯು ಈ ಬಾರಿ ₹ 7,090 ಕೋಟಿಯ ಭಾರಿ ಮೊತ್ತಕ್ಕೆ ಲಖನೌ ಫ್ರಾಂಚೈಸಿ ಪಡೆದುಕೊಂಡಿದೆ. ಇನ್ನೂ ಹೆಸರಿಡದ ಲಖನೌ ತಂಡಕ್ಕೆ ಗೌತಮ್ ಗಂಭೀರ್ ಅವರನ್ನು ಗೋಯೆಂಕಾ ಬರಮಾಡಿಕೊಂಡಿದ್ದಾರೆ.
'ಗಂಭೀರ್ ಅವರು ಕ್ರಿಕೆಟ್ ವೃತ್ತಿಜೀವನದಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ಅವರ ಆಟದ ಮನೋಭಾವವನ್ನು ನಾನು ಗೌರವಿಸುತ್ತೇನೆ. ಅವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ'ಎಂದು ಗೋಯೆಂಕಾ ಹೇಳಿದ್ಧಾರೆ.
'ಮತ್ತೆ ಐಪಿಎಲ್ ಕಣಕ್ಕೆ ಇಳಿಯುತ್ತಿರುವುದು ಒಳ್ಳೆಯ ಅವಕಾಶ. ಲಖನೌ ತಂಡದ ಸಲಹೆಗಾರರಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಡಾ. ಗೋಯೆಂಕಾ ಅವರಿಗೆ ಧನ್ಯವಾದ. ಗೆಲುವಿಗಾಗಿ ತುಡಿಯುವ ಜ್ವಾಲೆ ಈಗಲೂ ನನ್ನಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದೆ. ಗೆಲುವಿನ ಪರಂಪರೆ ಬಿಟ್ಟುಹೋಗುವ ಮನಸ್ಥಿತಿ ನನ್ನಲ್ಲಿದೆ'ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
58 ಟೆಸ್ಟ್, 147 ಏಕದಿನ ಮತ್ತು 37 ಟಿ-20 ಪಂದ್ಯಗಳನ್ನು ಪಂದ್ಯಗಳನ್ನು ಆಡಿರುವ ಗೌತಮ್ ಗಂಭೀರ್ ಅವರು, 2007ರಲ್ಲಿ ಟಿ-20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡದ ಸದಸ್ಯರಾಗಿದ್ದರು. ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ಪರ ಆಡಿರುವ ಅವರು, 154 ಪಂದ್ಯಗಳಲ್ಲಿ 4217 ರನ್ ಕಲೆ ಹಾಕಿದ್ದಾರೆ.