ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ಅಂಬಾತನಯ ಮುದ್ರಾಡಿ ಇನ್ನಿಲ್ಲ

ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ಅಂಬಾತನಯ ಮುದ್ರಾಡಿ ಇನ್ನಿಲ್ಲ

ಮಂಗಳೂರು: ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ನಾಟಕಕಾರ, ಪ್ರಸಂಗಕರ್ತ, ನಿವೃತ್ತ ಪ್ರಾಧ್ಯಾಪಕ ಅಂಬಾತನಯ ಮುದ್ರಾಡಿ ಎಂದೇ ಪ್ರಸಿದ್ಧರಾಗಿದ್ದ ಕೇಶವ ಶೆಟ್ಟಿಗಾರ ಅವರು ಮಂಗಳವಾರ ನಿಧನರಾದರು. ಅವರಿಗೆ 85 ವರ್ಷವಾಗಿತ್ತು. ವಯೋ ಸಹಜ ಅಸೌಖ್ಯದಿಂದ ಇದ್ದ ಇವರು ಇಂದು ಬೆಳಿಗ್ಗೆ ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಬಹುಮುಖ ಪ್ರತಿಭೆಯ ಮುದ್ರಾಡಿ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದ ಅವರು ಸಾಹಿತ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದರೂ ಕಾವ್ಯ ಅವರಿಗೆ ವಿಶೇಷವಾಗಿ ಒಲಿದಿತ್ತು. ಯಕ್ಷಗಾನ, ನಾಟಕ, ರಂಗಗಳಲ್ಲು ಅವರು ಮಿಂಚಿದ್ದಾರೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರೂ. ಕೊನೆಗಾಲದವರೆಗೂ ಬಹಳ ಸಕ್ರಿಯವಾಗಿ ಅವರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಅವರ ಲೋಕಜ್ಞಾನ ವಿಶೇಷವಾದುದು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು.