ಕಾರ್ಕಳದಿಂದ ಪ್ರಮೋದ್‌ ಮುತಾಲಿಕ್‌ ಸ್ಪರ್ಧೆ, ಶ್ರೀರಾಮಸೇನೆಯಲ್ಲಿ ಒಡಕು

ಕಾರ್ಕಳದಿಂದ ಪ್ರಮೋದ್‌ ಮುತಾಲಿಕ್‌ ಸ್ಪರ್ಧೆ, ಶ್ರೀರಾಮಸೇನೆಯಲ್ಲಿ ಒಡಕು

ಮಂಗಳೂರು: ಕಾರ್ಕಳದಿಂದ ಶ್ರೀ ರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪರ್ಧಿಸಲು ಮುಂದಾಗಿರುವುದು ಸಂಘಟನೆ ಒಡಕಿಗೆ ಕಾರಣವಾಗಿದೆ. ಶ್ರೀ ರಾಮ ಸೇನೆಯ ಒಂದು ಗುಂಪು ಮುತಾಲಿಕ್‌ ಸ್ಪರ್ಧೆ ವಿರುದ್ಧ ಬಹಿರಂಗವಾಗಿ ಹೋರಾಟಕ್ಕಿಳಿದಿದೆ. ಶ್ರೀರಾಮಸೇನೆ ಮಂಗಳೂರು ವಿಭಾಗ ಅವರ ಸ್ಪರ್ಧೆಯನ್ನು ವಿರೋಧಿಸುತ್ತಿದೆ.

ಕಾರ್ಕಳದಲ್ಲಿ ಶ್ರೀ ರಾಮ ಸೇನೆ ಸಂಘಟನೆ ಬಲಿಷ್ಠವಾಗಿಲ್ಲ, ಇಲ್ಲಿ ಗೆಲ್ಲುವುದು ಅಸಾಧ್ಯ. ಹೀಗಾಗಿ ಮುತಾಲಿಕ್ ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಉತ್ತಮ ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ಹೇಳುತ್ತಿದ್ದಾರೆ.
ಉಡುಪಿಯಲ್ಲಿ ಭಾನುವಾರ ನಡೆದ ಶ್ರೀರಾಮಸೇನೆ ಕಾರ್ಯಕರ್ತರ ಬೈಠಕ್‌ನಲ್ಲಿ ಅವರು ಮುತಾಲಿಕ್‌ ಸ್ಪರ್ಧೆಯಿಂದ ಸಂಘಟನೆ ಮೇಲಾಗುವ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ಸ್ಪರ್ಧಿಸುವುದೇ ಆದರೆ ಸಂಘಟನೆಯಿಂದ ಹೊರ ನಡೆಯಿರಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಮುತಾಲಿಕ್ ಅವರಿಗೆ ತೇರದಾಳ ಅಥವಾ ಜಮಖಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವ ಭರವಸೆಯನ್ನು ಸಿಟಿ ರವಿ ಅವರು ನೀಡಿದ್ದಾರೆ. ಹಾಗಾಗಿ ಕಾರ್ಕಳ ಕ್ಷೇತ್ರದ ಸ್ಪರ್ಧೆಯ ಬಗ್ಗೆ ಮುತಾಲಿಕ್ ಮರುಚಿಂತನೆ ಮಾಡಬೇಕು ಎಂದಿದ್ದಾರೆ. ಸಂಘಟನೆಯ ಕೆಲ ರಾಜ್ಯ ನಾಯಕರು ಹಾಗೂ ಉದ್ಯಮಿ ವಿವೇಕಾನಂದ ಶೆಣೈ ಮತ್ತು ವಕೀಲ ಹರೀಶ್ ಅಧಿಕಾರಿ ಅವರು ಪ್ರಮೋದ್ ಮುತಾಲಿಕ್ ಅವರನ್ನು ಹೈಜಾಕ್ ಮಾಡಿ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕೆ ಇಳಿಸಿದ್ದಾರೆ. ಇವರೆಲ್ಲರು ರಾಜಕೀಯ ದುರಾಸೆಯಿಂದ ಇಡೀ ಸಂಘಟನೆಯನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಪರಮೋಚ್ಚ ನಾಯಕ ಪ್ರಮೋದ್ ಮುತಾಲಿಕ್ ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಅವರ ಜತೆ ನಮ್ಮ ಸಂಘಟನೆಯ ಮರ್ಯಾದೆ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮಾಣ ಮಾಡಿ: ವಾರದ ಹಿಂದೆ ಪತ್ರಿಕಾಗೋಷ್ಠಿ ಕರೆದು ಈ ವಿಚಾರ ಹೇಳಿದಾಗ ಕೆಲವರು ನನ್ನ ವಿರುದ್ಧ ಹಣ ಪಡೆದು ಕೊಂಡಿದ್ದೇನೆ, ಉಡುಪಿಯ ಸ್ವಾಮೀಜಿಯೊಬ್ಬರಿಗೆ ಹೆಣ್ಣು ಸಪ್ಲೈ ಮಾಡಿದ್ದೇನೆ ಎಂಬ ಆರೋಪ ಮಾಡಿದರು. ನನ್ನ ಮೇಲೆ ಆರೋಪ ಮಾಡಿದವರು ಯಾರೂ ಸಂಘಟನೆಯ ಕಾರ್ಯಕರ್ತರಲ್ಲ. ನನ್ನ ಮೇಲೆ ಆರೋಪ ಮಾಡಿದವರು ತಾಕತ್ತಿದ್ದರೆ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ, ಧರ್ಮಸ್ಥಳದ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಹಣ ತೆಗೆದುಕೊಂಡಿಲ್ಲ ಎಂದು ಎಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದ್ದಾರೆ